ಚಾ.ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಉತ್ತಮ ಕಾರ್ಯ: ಮಾಜಿ ಸಂಸದ ಪ್ರತಾಪಸಿಂಹ ಮೆಚ್ಚುಗೆ

prathap simha Bjp
Published on

ಮೈಸೂರು: ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಆದರೆ ಈಗ ಸಿದ್ದರಾಮಯ್ಯ ಪ್ರಾಧಿಕಾರ ರಚನೆ ಮಾಡಿದ್ದಾರೆ. ಖಂಡಿತ ಇದು ಒಳ್ಳೆಯ ಕೆಲಸ. ಸಿದ್ದರಾಮಯ್ಯ ಅವರ ಕೆಲ ಸೈದ್ಧಾಂತಿಕ ವಿಚಾರದಲ್ಲಿ ವಿರೋಧಿಸಿ ಉತ್ತಮ ಕೆಲವನ್ನು ಶ್ಲಾಘಿಸಲಾಗುವುದು ಎಂದು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ಚಾಮುಂಡಿಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ನ್ಯೂನತೆ ಸರಿದೂಗಿಸಲು ಪ್ರಾಧಿಕಾರ ಅವಶ್ಯಕತೆ ಇದೆ. ಬೆಟ್ಟಕ್ಕೆ ಪೋಲಿಸ್ ಠಾಣೆ ಹಾಗೂ ಆಸ್ಪತ್ರೆ ಬೇಕು. ಇದೆಲ್ಲ ಆಗಲು ಒಂದು ಪ್ರಾಧಿಕಾರ ಬೇಕೇ ಬೇಕು ಎನ್ನುವ ಮೂಲಕ ಪರೋಕ್ಷವಾಗಿ ರಾಜವಂಶಸ್ಥ ಯದುವೀರ್ ಒಡೆಯರ್‌ಗೆ ಟಾಂಗ್ ಕೊಟ್ಟರು.
ನಾನು ಆಸ್ತಿ ಬಗ್ಗೆ ಮಾತನಾಡುವುದಿಲ್ಲ. ಆದರೆ ದೇವರು, ಭಕ್ತರಿಗೆ ಬೆಟ್ಟ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅಮೃತ್ ಯೋಜನೆಯಡಿ ಕುಡಿಯುವ ನೀರು ಚಾಮುಂಡಿ ಬೆಟ್ಟಕ್ಕೆ ತಲುಪದಿರಲು ಕಾರಣ ಯಾರು? ನಾನು ಹೇಳಿದರೆ ಗೊಂದಲ ಆಗುತ್ತದೆ. ಪೈಪ್‌ಲೈನ್ ಎಲ್ಲಿ ತಡೆದು ನಿಂತಿದೆ ಎಂಬುದನ್ನು ನೀವೇ ಹೋಗಿ ಹುಡುಕಿ ಎನ್ನುವ ಮೂಲಕ ಪರೋಕ್ಷವಾಗಿ ರಾಜವಂಶಸ್ಥರನ್ನು ದೂರಿದರು.

ಚಾಮುಂಡಿ ಬೆಟ್ಟದ ದೇವಿಕೆರೆ ಮೇಲೆ ನಮಾಜ್ ಮಾಡುತ್ತಿದ್ದರು. ಚಾಮುಂಡಿ ಬೆಟ್ಟದಲ್ಲಿ 12 ಮುಸ್ಲಿಂ ಅಂಗಡಿಗಳು ಇದ್ದವು. ಹಿಂದುಗಳ ದೇವಸ್ಥಾನ, ಭಕ್ತಿಭಾವದಿಂದ ಹೋಗುವ ಜಾಗದಲ್ಲಿ ಇವರು ಯಾಕೆ ಅಂಗಡಿ ಇಡಬೇಕು. ಮುಜರಾಯಿ ಕಾನೂನಿನಲ್ಲಿ ಕೂಡ ಇದಕ್ಕೆ ಅವಕಾಶ ಇಲ್ಲ ಎಂದು ಮುಸ್ಲಿಂ ಅಂಗಡಿಗಳನ್ನು ತೆಗೆಸಿದ್ದೆ. ಚಾಮುಂಡೇಶ್ವರಿಗೆ ಅವಮಾನ ರೀತಿಯಲ್ಲಿದ್ದ ಮಹಿಷ ದಸರಾ ತಡೆಯುವ ಕೆಲಸ ಮಾಡಿದೆ ಎಂದರು.
ಅಂದು ಚಾಮುಂಡೇಶ್ವರಿ ತಾಯಿಗೆ ಅನ್ಯಾಯ ಆಗುವಾಗ ಯಾರೂ ಮಾತನಾಡಿಲ್ಲ. ಇಂದು ಬೇರೆ ಬೇರೆ ಕಾರಣಕ್ಕೆ ವಿವಾದ ಮಾಡುತ್ತಿದ್ದಾರೆ. ಅಂತಹ ವಿವಾದಕ್ಕೆ ಯಾರೂ ಆಸ್ಪದ ನೀಡಬಾರದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net