ಕಂಚಿನೆಗಳೂರಿನ ವಡ್ಡಿನ ಬಳಿ ಜಲಪಾತ ಸೃಷ್ಟಿ

waterfall of Kanchinegalore
Published on

ಅಕ್ಕಿಆಲೂರ: ಎರಡ್ಮೂರು ದಿನಗಳಿಂದ ಮಳೆ ಹೆಚ್ಚಿರುವುದರಿಂದ ಧರ್ಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದಾಗಿ ಕಂಚಿನೆಗಳೂರಿನ ಬಳಿಯ ವಡ್ಡಿನಲ್ಲಿ ಜಲಪಾತ ನಿರ್ಮಾಣವಾಗಿದ್ದು, ಜನ ಸುರಿಯುವ ಮಳೆಯಲ್ಲೂ ನೋಡಲು ಆಗಮಿಸುತ್ತಿದ್ದಾರೆ.

2019ರ ಪ್ರವಾಹದ ನಂತರ ಇದೇ ಮೊದಲ ಬಾರಿಗೆ ಕಂಚಿನೆಗಳೂರ ಬಳಿ ಮತ್ತೆ ಜಲಪಾತದಂತೆ ಧುಮ್ಮುಕುತ್ತಿದೆ. ಧರ್ಮಾ ನದಿಯಲ್ಲಿ ಹರಿದು ಬರುವ ನೀರು ಇಲ್ಲಿ ಎರಡು ಭಾಗವಾಗುತ್ತದೆ. ಅದರಲ್ಲಿ ಒಂದು ಸಣ್ಣಭಾಗ ಕಂಚಿನೆಗಳೂರಿನ ವಡ್ಡಿನ ಮೂಲಕ ಕಾಲುವೆಗೆ ಹರಿದು ನರೇಗಲ್ಲ ಗ್ರಾಮದ ಕೆರೆಗೆ ಸೇರುತ್ತದೆ.

ವಡ್ಡಿನ ಬಳಿ ಮಾಡಿರುವ ವ್ಯವಸ್ಥೆಯಿಂದಾಗಿ ಜಲಪಾತದ ದೃಶ್ಯ ಸೃಷ್ಟಿಯಾಗಿದೆ. ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರ ಜತೆಗೆ ಹಾವೇರಿ ಭಾಗದಿಂದಲೂ ಜನರು ಬಂದು ಹೋಗುತ್ತಿದ್ದಾರೆ. ಇದರಿಂದಾಗಿ ಈ ಸ್ಥಳ ಸದ್ಯ ಪ್ರವಾಸಿ ತಾಣವಾಗಿದೆ. ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರು ನೀರಿಗೆ ಇಳಿದು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಕಂಚಿನೆಗಳೂರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್​ ರೇಣುಕಾ, ಸಂಭವಿಸಬಹುದಾದ ಅಪಾಯದ ಕುರಿತು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

ಜನರ ಹಿತದೃಷ್ಟಿಯಿಂದ ಕಂಚಿನೆಗಳೂರ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆೆ. ಜಲಪಾತದ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ತಹಸೀಲ್ದಾರ್​ ರೇಣುಕಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net