

ಶಿವಮೊಗ್ಗ: ಹಿಂದುಗಳು ಪರಸ್ಪರ ಹೊಡೆದಾಡಿಕೊಳ್ಳುವ ಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸುತ್ತಿದೆ. ಜಾತಿಗಣತಿ ಕಾಲಂನಲ್ಲಿ ಹೊಸದಾಗಿ 49 ಕಾಲಂಗಳನ್ನು ಸೇರಿಸಲಾಗಿದೆ. ಇದರಲ್ಲಿ ಹಿಂದು ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ಸೇರಿಸಿರುವುದು ಮತಾಂತರವನ್ನು ರಾಷ್ಟ್ರಾಂತರ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ದೂರಿದರು.
ಜಾತಿಗಳ ಕಾಲಂನಲ್ಲಿ ಆದಿ ದ್ರಾವಿಡ ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್ ಎಂದು ಹೊಸದಾಗಿ 49 ಕಾಲಂಗಳನ್ನು ಹುಟ್ಟುಹಾಕಿರುವುದನ್ನು ಹಿಂದು ಸಮಾಜ ಸಹಿಸುವುದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಾಗಮಂಗಲ, ಹುಬ್ಬಳ್ಳಿ ಬಳಿಕ ಸಾಗರದಲ್ಲಿಯೂ ಗಣಪತಿ ಮೆರವಣಿಗೆ ಮೇಲೆ ಉಗಿಯುವ ಮಕ್ಕಳ ಮಾನಸಿಕತೆ ನೋಡಿದ್ದಾಯಿತು. ಮಸೀದಿಯೊಳಗಿನಿಂದ ಕಲ್ಲು ಹೊಡೆಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವ ಬದಲು, ಅದನ್ನು ಪ್ರತಿಭಟಿಸಿದ ಮಹಿಳೆಯರ ಮೇಲೂ ಸರ್ಕಾರ ಲಾಠಿ ಚಾರ್ಜ್ ಮಾಡಿದ್ದಾಯಿತು. ರಾಷ್ಟ್ರದ್ರೋಹಿಗಳನ್ನು ರಕ್ಷಣೆ ಮಾಡುವ ಮನಸ್ಥಿತಿಯನ್ನು ಕಾಂಗ್ರೆಸ್ ಬಿಡಬೇಕು ಎಂದು ಆಗ್ರಹಿಸಿದರು.
ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದವರನ್ನು ಬಿಟ್ಟು ಹಿಂದುಗಳನ್ನು ಬಂಧಿಸಲಾಗುತ್ತಿದೆ. ಇದು ಕಾಂಗ್ರೆಸ್ ಕೊಡುಗೆ. ಕಾಂಗ್ರೆಸ್‌ನಲ್ಲಿ ಕ್ರಿಶ್ಚಿಯನ್ ಮತ್ತು ಮುಸಲ್ಮಾನ್ ಜೀನ್ಸ್ ಇದೆ. ಅವರೆಡು ವರ್ಗದ ತೃಪ್ತಿಗಾಗಿ ಹಿಂದುಗಳ ಮೇಲೆ ದೌರ್ಜನ್ಯ, ಲಾಠಿಚಾರ್ಜ್ ಆಗಾಗ ನಡೆಯುತ್ತಿರುತ್ತದೆ ಎಂದು ದೂರಿದರು.
ಡಿಜೆ ಹಾಕಿದವರಿಗೆ ನೋಟಿಸ್ ನೀಡುವ ಸರ್ಕಾರ, ಜಿಲ್ಲಾ ರಕ್ಷಣಾಧಿಕಾರಿಗೇ ತಲ್ವಾರ್ ತೋರಿಸಿದಾಗ ಏಕೆ ನೋಟಿಸ್ ನೀಡಲಿಲ್ಲ? ಗೋಹಂತಕರನ್ನು ಬಂಧಿಸುವ ಬದಲು ದೂರು ನೀಡಲು ಹೋದ ಗೋರಕ್ಷಕರನ್ನು ಬಂಧಿಸುವುದು ಯಾವ ನ್ಯಾಯ? ಮದರಸಾದಲ್ಲಿ ಮಕ್ಕಳಿಗೆ ಉತ್ತಮ, ನೈತಿಕ ಹಾಗೂ ದೇಶಭಕ್ತಿಯ ಶಿಕ್ಷಣ ಕೊಡಿ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ದೀನದಯಾಳು, ಎಸ್.ಜ್ಞಾನೇಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.