

ಗುತ್ತಲ: ‘ಸೃಷ್ಠಿ ಸಿರಿಯಾಗಿ, ಭೂಮಿ ತಂಪಾತಲೇ ಪರಾಕ್’ ಇದು ಇಲ್ಲಿನ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಗುರುವಾರ ಸಂಜೆ ಹೇಳಿದರು.
ಕಳೆದ 359 ವರ್ಷಗಳಿಂದ ಹಾವನೂರ ಗ್ರಾಮದಲ್ಲಿನ ಚಿಕ್ಕಮೈಲಾರದ ಕಾರ್ಣಿಕೋತ್ಸವವು ಮೈಲಾರದ ಡೆಂಕನಮರಡಿಯಲ್ಲಿ ನುಡಿಯುವ ಕಾರ್ಣಿಕ ದಿನದ ಹಿಂದಿನ ದಿನ (ಭರತ ಹುಣ್ಣಿಮೆಯ ಮರುದಿನ) ಇಲ್ಲಿ ಕಾರ್ಣಿಕ ಹೇಳಲಾಗುತ್ತಿದೆ.
ಗುರುವಾರ ಸಂಜೆ ಸಾಂಪ್ರದಾಯಿಕ ಪೂಜೆಗಳ ನಂತರ ಮೈಲಾರಲಿಂಗೇಶ್ವರನನ್ನು ಮೆರವಣಿಗೆಯಲ್ಲಿ ತರಲಾಯಿತು. ನಂತರ ಚಿಕ್ಕ ಮೈಲಾರದಿಂದ ಗಂಗಮಾಳವ್ವ ಮೂರ್ತಿಗಳ ಆಗಮನದ ನಂತರ ಗೊರವಪ್ಪನು 15-20 ಅಡಿ ಎತ್ತರದ ಬಿಲ್ಲನ್ನು ಏರಿ ವರ್ಷ ಭವಿಷ್ಯ ಎಂದೇ ಅರ್ಥೈಸಲಾಗುವ ಕಾರ್ಣಿಕದ ನುಡಿ ಹೇಳಲು ಬಿಲ್ಲನೇರಿ ‘ಸದ್ದಲೇ’ ಎನ್ನತ್ತಲೇ ಭಕ್ತರು ಮೌನವಾದರು. ನಂತರ ಒಂದೇ ವಾಕ್ಯದ ವರ್ಷ ಭವಿಷ್ಯವನ್ನು ಹೇಳಿ ಮೇಲಿಂದ ಗೊರವಪ್ಪ ವಾಯವ್ಯ ದಿಕ್ಕಿನ ಕಡೆ ತಲೆ ಮಾಡಿ ಬಿದ್ದಿದ್ದರಿಂದ ಆ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗುವುದೆಂಬ ನಂಬಿಕೆ ಭಕ್ತರದ್ದು.
ಈ ಬಾರಿಯ ಭವಿಷ್ಯವು ಅನೇಕ ರೀತಿಯಲ್ಲಿ ಅರ್ಥೈಸಲಾಗಿದೆ. ಈ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿದ್ದು ಇಡಿ ಜಗತ್ತೇ ಸಿರಿಯಾಗುವುದು. ಕಳೆದ 2-3 ವರ್ಷಗಳಿಂದ ತಾಪಮಾನ ಏರುತ್ತಿದ್ದು, ಈ ಬಾರಿ ಭೂಮಿ ತಂಪಾಗುವುದು ಎಂದು ಅರ್ಥೈಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಮೈಲಾರ ಕ್ಷೇತ್ರದಂತೆ ಹಾವನೂರನಲ್ಲಿ ನುಡಿಯುವ ಕಾರ್ಣಿಕೋತ್ಸದ ಭವಿಷ್ಯವಾಣಿ ನಿಜವಾಗುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಇಲ್ಲಿಯೂ ಭವಿಷ್ಯವಾಣಿಯನ್ನು ಅನೇಕರು ಆಸಕ್ತಿಯಿಂದ ಕೇಳಲು ಆಗಮಿಸುತ್ತಿದ್ದಾರೆ.
ಮೈಲಾರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಕೃಷ್ಣಭಟ್ ಪೂಜಾರ, ಗ್ರಾಮದೇವತಾ ಪಂಚ ಕಮಿಟಿ ಅಧ್ಯಕ್ಷ ಶಿವಾನಂದಯ್ಯ ಕರಸ್ಥಳಮಠ, ಶ್ಯಾಮಸುಂದರ ಸದರಜೋಷಿ, ವಿಲಾಸ ಜೋಗ, ನಾರಾಯಣಪ್ಪ ಕಮ್ಮಾರ, ಸುಭಾಷ ಮೈಲಾರ, ಅಶೋಕ ಮೈಲಾರ, ಗ್ರಾಪಂ ಸದಸ್ಯರಾದ ದಿಳ್ಳೆಪ್ಪ ಗೊಣ್ಣಿ, ಗೋಪಾಲ ಗೊಣ್ಣಿ, ಸುನೀಲ ಕೆಂಗನಿಂಗಪ್ಪನವರ ಇತರರು ಇದ್ದರು.