

ಮೈಸೂರು: ಮುಂದಿನ ದಿನಗಳಲ್ಲಿ ದೇಶದಲ್ಲಿಯೇ ಉತ್ತಮ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ವಿದ್ಯಾರ್ಥಿಗಳು ಓದಿನ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ವಲಯ ಉಪ ಪೊಲೀಸ್ ಮಹಾನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.
ಮೈಸೂರು ವಿಶ್ವವಿದ್ಯಾಲಯವು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸದ್ಯ ದೇಶದ ಯುವಕರು ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಈಗ ನಮ್ಮ ದೇಶವೂ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮಲ್ಲಿಯೇ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಆಗ ವಿದೇಶಕ್ಕೆ ಹೋಗುವುದು ತಪ್ಪುತ್ತದೆ ಎಂದು ನುಡಿದರು.
ಈಗಲೂ ಸಾಕಷ್ಟು ಉದ್ಯೋಗಗಳಿವೆ. ಆದರೆ, ಗುಣಮಟ್ಟದ ಕೆಲಸಗಾರರ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ಪದವಿಯ ಜತೆಗೆ ವಿವಿಧ ಕೌಶಲಗಳನ್ನು ಕಲಿಯಬೇಕು. ಆಗ ದೇಶದ ಅಭಿವೃದ್ಧಿಗೆ ನೀವು ಸಹಕಾರ ನೀಡಬಹುದು ಎಂದರು.
ಸದ್ಯ ಜೀವನದಲ್ಲಿ ಶ್ರಮಪಟ್ಟು ಕೆಲಸ ಮಾಡಬೇಕು. ಸವಾಲು ಇಲ್ಲದೆ ಯಾವುದೇ ಸಾಧನೆ ಮಾಡುವುದು ಕಷ್ಟವಾಗುತ್ತದೆ. ನಾವು ಯುಪಿಎಸ್‌ಸಿ ಪರೀಕ್ಷೆ ಬರೆದಾಗ ಕೇವಲ ತಲಾ 100 ಐಎಎಸ್, ಐಪಿಎಸ್ ಹುದ್ದೆಗಳು ಇದ್ದವು. ಒಟ್ಟಾರೆ 4 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆಗ ಇಂತಹ ತರಬೇತಿ ಇರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವರಾದ ವಿ.ಆರ್.ಶೈಲಜಾ, ಪ್ರೊ.ಕೆ.ಎಂ.ಮಹದೇವನ್, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಇತರರಿದ್ದರು.