

ಶಿಕಾರಿಪುರ: ಕ್ರೀಡೆಗಳು ನಮ್ಮನ್ನು ಚೇತೋಹಾರಿ ಆಗಿಡುವುದಲ್ಲದೆ ನಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಸೃಜಿಸುವಂತೆ ಮಾಡುತ್ತವೆ. ಆಟೋಟಗಳು ನಮ್ಮ ದೈನಂದಿನ ಬದುಕಿನ ಒಂದು ಭಾಗವಾದಾಗ ಮಾತ್ರ ನಾವು ದೈಹಿಕವಾಗಿ ಆರೋಗ್ಯವಾಗಿರುತ್ತೇವೆ ಎಂದು ಪಿಎಸ್‌ಐ ಪ್ರಶಾಂತ್ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಪದವಿಪೂರ್ವ ಶಿಕ್ಷಣ ಇಲಾಖೆ, ಲಯನ್ಸ್ ಕ್ಲಬ್, ಲಿಯೋ ಕ್ಲಬ್, ಲಯನ್ಸ್ ಬನಸಿರಿ ವಿದ್ಯಾಸಂಸ್ಥೆ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇಂದು ಯುವಜನತೆ ನಮ್ಮ ಶ್ರೇಷ್ಠ ಕ್ರೀಡೆಗಳಿಗಿಂತ ಆನ್‌ಲೈನ್ ಕ್ರೀಡೆಗಳ ಗೀಳು ಹಿಡಿಸಿಕೊಂಡಿರುವುದು ದುರದೃಷ್ಟಕರ. ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಈ ಯಶಸ್ಸಿನಲ್ಲಿ ವಿದ್ಯಾರ್ಥಿಗಳ ಜತೆಗೆ ಪಾಲಕರ ಮತ್ತು ಶಿಕ್ಷಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ ಎಂದರು.
ನಮ್ಮ ದೇಸಿ ಕ್ರೀಡೆಗಳು ಈಗಾಗಲೇ ಸಾಕಷ್ಟು ನಶಿಸಿ ಹೋಗಿವೆ. ಅಳಿದುಳಿದ ದೇಸಿ ಕ್ರೀಡೆಗಳನ್ನು ನಾವು ಉಳಿಸಿ ಬೆಳೆಸಬೇಕಾಗಿದೆ. ಸಾಂಪ್ರದಾಯಿಕ ಆಟಗಳು ನಮ್ಮ ಸಂಸ್ಕೃತಿಯ, ಹಿರಿಮೆಯ ಸಂಕೇತವಾಗಿದೆ. ನಮ್ಮಲ್ಲಿ ಯಾವತ್ತೂ ಆರೋಗ್ಯಕರವಾದ ಸ್ಪರ್ಧೆಯಿರಬೇಕು. ಸ್ಪರ್ಧಾತ್ಮಕ ಮನೋಭಾವನೆ ನಮ್ಮಲ್ಲಿ ಛಲ, ಸ್ವಾಭಿಮಾನ, ಗುರಿಯನ್ನು ಹುಟ್ಟುಹಾಕುತ್ತದೆ. ಯಾವುದೇ ಕೆಲಸವಾಗಲಿ ನಿರಂತರವಾದ ಪರಿಶ್ರಮವಿಲ್ಲದೆ ಯಶಸ್ಸು ತಂದು ಕೊಡುವುದಿಲ್ಲ. ನಮ್ಮ ಸಂಕಲ್ಪಶಕ್ತಿ ಸದೃಢವಾಗಿರಬೇಕು. ಸಾಧಿಸುವಾಗ ಸಹನೆ ಮತ್ತು ಸಂಯಮ ನಮ್ಮದಾಗಬೇಕು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೃಷ್ಣಪ್ಪ ಮಾತನಾಡಿ, ಪಠ್ಯಗಳ ಜತೆಗೆ ಕ್ರೀಡೆಗಳಿದ್ದರೆ ಶಿಕ್ಷಣ ಪರಿಪೂರ್ಣ ಆಗುವುದು. ಕ್ರೀಡೆಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಯುವಕರು ಕ್ರೀಡೆಗಳ ಕಡೆಗೂ ಗಮನ ೊಡಬೇಕು. ಇಂತಹ ಕ್ರೀಡಾಕೂಟಗಳು ನಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ. ದೃಢ ವಿಶ್ವಾಸವೇ ನಮಗೆ ಸದಾ ನೆರಳಾಗುತ್ತದೆ. ಸದೃಢವಾದಂತಹ ದೇಹದಲ್ಲಿ ಯಾವಾಗಲೂ ಸದೃಢವಾದ ಮನಸ್ಸಿರುತ್ತದೆ. ಕ್ರೀಡೆಗಳು ಮನಸಿನ ಕಲ್ಮಶಗಳನ್ನು ತೊಡೆದು ಹಾಕಿ ಉತ್ಸಾಹವನ್ನು ತುಂಬುತ್ತವೆ ಎಂದರು.
ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಾನಂದ ಶಾಸ್ತ್ರಿ, ಉಪಾಧ್ಯಕ್ಷ ಎಚ್.ಜಿ.ಜಯಣ್ಣ, ಕಾರ್ಯದರ್ಶಿ ಡಿ.ಕೆ.ಮಲ್ಲಿಕಾರ್ಜುನ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಮೂರ್ತಿ, ಲಯನ್ಸ್ಸ್ ಕ್ಲಬ್ ಅಧ್ಯಕ್ಷೆ ಮಮತಾ ಬಾಲಚಂದ್ರ, ಕಾರ್ಯದರ್ಶಿ ಸ್ವಾತಿ ಬಸವರಾಜ್, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಚಂದ್ರಪ್ಪ ಗುಂಡಪಲ್ಲಿ, ಜಿಲ್ಲಾ ಉಪನ್ಯಾಸಕರ ಅಧ್ಯಕ್ಷ ಯೋಗೀಶ್, ತಾಲೂಕು ಸಂಘದ ಅಧ್ಯಕ್ಷ ದೇವಕುಮಾರ್, ಪ್ರಾಚಾರ್ಯರಾದ ಸುರೇಶ್ ಲಮಾಣಿ, ಜೆ.ಎಂ.ನಾಗರಾಜಪ್ಪ, ಉಪನ್ಯಾಸಕರಾದ ಬಂಗಾರಪ್ಪ, ಪುಟ್ಟಪ್ಪ, ಪ್ರಶಾಂತ್ ಇತರರಿದ್ದರು.