ಉತ್ತಮ ಆರೋಗ್ಯದಿಂದ ಸ್ವಾಸ್ಥೃ ಸಮಾಜ ಸೃಷ್ಟಿ

22 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರೋಗ್ಯವೇ ಮಾನವನ ಅತಿ ಅಮೂಲ್ಯವಾದ ಸಂಪತ್ತು. ನಮ್ಮ ಜೀವನದ ಸುಖ-ದುಖಃಗಳಲ್ಲಿ ನಮ್ಮೊಂದಿಗೆ ಉಳಿವುದು ಉತ್ತಮ ಆರೋಗ್ಯ ಮಾತ್ರ. ನಾವು ಸಮಾಜದಲ್ಲಿ ದೈಹಿಕ, ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಹೊಂದಿದಾಗ ಮಾತ್ರ ಸಂಬಂಧಗಳು ಪರಸ್ಪರ ಗಟ್ಟಿಯಾಗಿರುತ್ತವೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಬಾಷ್, ಬೆಂಗಳೂರಿನ ಆಕ್ಟ್ ಆಫ್ ಕೈಂಡ್‌ನೆಸ್ ಅಡಿ ಶಾಲಾ ವಾಹನ ಚಾಲಕ ಹಾಗೂ ನಿರ್ವಾಹಕರಿಗೆ ಶನಿವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಸಂಸ್ಥೆ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಪಡೆಯಲು ಸಂಸ್ಥೆ ಸಿಬ್ಬಂದಿ ಕಾರಣ. ಅಂತಹ ಸಿಬ್ಬಂದಿ ಆರೋಗ್ಯ ಮತ್ತು ಸ್ವಾಸ್ಥ್ಯ ಕಾಪಾಡುವುದು ಪ್ರತಿ ಸಂಸ್ಥೆಯ ಹಿರಿಯರ ಜವಾಬ್ದಾರಿ. ಸಿಬ್ಬಂದಿ ಕೆಲಸ ನಿರ್ವಹಿಸಲು ಅನುಕೂಲಕರ ವಾತಾವರಣ ಸೃಷ್ಟಿಸಿದಾಗ ಮಾತ್ರ ಕೆಲಸಗಾಗರು ಅತಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಸಂಸ್ಥೆ ಹೆಸರನ್ನು ಬಹು ಎತ್ತರಕ್ಕೆ ಬೆಳೆಸಬಲ್ಲರು ಎಂದರು.
ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ಚಾಲಕರು, ನಿರ್ವಾಹಕರು ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸುವುದು ಒಳ್ಳೆಯದು. ನಿಮ್ಮ ಹೆಗಲೆ ಮೇಲೆ ಎಷ್ಟೋ ಶಾಲಾ ಮಕ್ಕಳ, ಪ್ರಯಾಣಿಕರ ಜವಾಬ್ದಾರಿ ಇರುತ್ತದೆ. ಕಣ್ಣಿನ ಸಮಸ್ಯೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಂತಹ ರೋಗಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದುದು ನಿಮ್ಮ ಕರ್ತವ್ಯ. ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
70ಕ್ಕೂ ಹೆಚ್ಚು ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಡಾ. ಸತೀಶ ಇರಕಲ್, ಮಹಾಂತೇಶ ವೀರಾಪುರ, ಡಾ. ಸುಹಾಸ ಹಂಚಿನಮನಿ, ಬಿ.ಎ ತಡಕೋಡ, ಸುಕನ್ಯಾ ಗುಮಗೋಳಮಠ, ಮಂಜುನಾಥ ಚಟ್ಟೇರ, ಎಂ.ಎಂ. ಜೋಶಿ ಆಸ್ಪತ್ರೆ, ರೆಡ್‌ಕ್ರಾಸ್ ರಕ್ತ ಭಂಡಾರದ ಸಿಬ್ಬಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net