ಹಾಸನ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು ಭಯಭೀತರಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಸೂಚಿಸಿದ್ದಾರೆ.
ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಜೂ.25 ರಿಂದ ಜು. 4ರವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾಗದಂತೆ, ಪರೀಕ್ಷೆಗೆ ಮುನ್ನ ಮತ್ತು ನಂತರ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು ಎಂದರು.
ಜೂ.24 ರಂದು ಕೇಂದ್ರಗಳಲ್ಲಿ ಕೂರುವ ಕೊಠಡಿ ಹಾಗೂ ಸ್ಥಳಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳು ಬರುತ್ತಾರೆ. ಹಾಗಾಗಿ ಅಂದು ಹಾಗೂ ಉಳಿದೆಲ್ಲ ದಿನದಂದು ಸ್ಯಾನಿಟೈಸೇಷನ್ ಮಾಡಬೇಕು. ವಿದ್ಯಾರ್ಥಿಗಳು ಕ್ವಾರಂಟೈನ್ ಕೇಂದ್ರಗಳಲ್ಲಿದ್ದರೆ ಅಥವಾ ಸೋಂಕಿತರಾಗಿದ್ದರೆ ಪೂರಕ ಪರೀಕ್ಷೆಯ ದಿನದಂದು ಅವರಿಗೆ ಪರೀಕ್ಷೆ ಬರೆಸಿ ಪ್ರಥಮ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷೆ ದಿನದಂದು ತಪಾಸಣೆ ಮಾಡುವುದರಿಂದ ಬೆಳಗ್ಗೆ 7.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಮಕ್ಕಳು ಬರಲಿದ್ದು, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ನೌಕರರು ಸಮಯಕ್ಕೆ ಸರಿಯಾಗಿ ಹಾಜರಿರಬೇಕು.
ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಒಂದುಗೂಡಿ ಕಂಟೇನ್ಮೆಂಟ್ ವಲಯಗಳಲ್ಲಿ ಪರೀಕ್ಷೆ ಬರೆಯುವವರು ಎಷ್ಟು ಮಕ್ಕಳಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಅಂತಹ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ನಡೆಸಿ ಮತ್ತು ಎಲ್ಲರಿಗೂ ಎನ್-95 ಮಾಸ್ಕ್ ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಿರುವ ಮಾಸ್ಕ್‌ಗಳನ್ನು ಹೊರತುಪಡಿಸಿ ದಾನಿಗಳು, ಸಂಘ ಸಂಸ್ಥೆಗಳು ಮಾಸ್ಕ್ ನೀಡಲು ಬಂದರೆ ಅಂತವರನ್ನು ಪರೀಕ್ಷಾ ಕೇಂದ್ರದ ಬಳಿ ಸೇರಿಸದಂತೆ ಎಚ್ಚರ ವಹಿಸಬೇಕು. ಪ್ರತಿ ವಿದ್ಯಾರ್ಥಿ ಮನೆಯಿಂದಲೇ ಕುಡಿಯುವ ನೀರನ್ನು ತರಬೇಕು. ಪರೀಕ್ಷಾ ಕೇಂದ್ರಗಳ ಶೌಚಗೃಹ ಪ್ರತಿದಿನ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳು ಧರಿಸುವ ಮಾಸ್ಕ್ ಆರಾಮದಾಯಕವಾಗಿವೆ ಎಂಬುದನ್ನು ಪರಿಶೀಲಿಸಲು ಸೂಚನೆ ನೀಡಿ ಹಾಗೂ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಧ್ವನಿವರ್ಧಕದ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ಮತ್ತು ಪರೀಕ್ಷೆ ಕುರಿತು ಇರುವ ಭಯ ಹೋಗಲಾಡಿಸುವ ಕೆಲಸ ಮಾಡಿ ಎಂದರು.
ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈಗಾಗಲೇ ಹಾಕಿಕೊಂಡಿರುವ ಪೂರ್ವ ಸಿದ್ಧತೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ, ಜಿಪಂ ಆಡಳಿತ ಉಪ ಕಾರ್ಯದರ್ಶಿ ಚಂದ್ರಶೇಖರ್, ಡಿಡಿಪಿಐ ಕೆ.ಎಸ್.ಪ್ರಕಾಶ್ ಹಾಗೂ ಇತರರಿದ್ದರು.