

ಯಳಂದೂರು: ತಾಲೂಕಿನ ವಡಗೆರೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಶುಕ್ರವಾರ ಗಿಡ ನೆಟ್ಟು ನೀರೆರೆಯುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಆರಕ್ಷಕ ವೃತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ಪರಿಸರ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಬಾಲ್ಯದಲ್ಲೇ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಜತೆಗೆ ಪರಿಸರ ಸಂರಕ್ಷಣೆ ಮಕ್ಕಳ ಪಠ್ಯದ ಭಾಗವಾಗಬೇಕು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ತ್ಯಜಿಸಬೇಕು, ಪ್ಲಾಸ್ಟಿಕ್ ಬಳಕೆಯಿಂದ ವಿಶ್ವದಲ್ಲಿ ಆಗುತ್ತಿರುವ ಬದಲಾವಣೆ, ಆರೋಗ್ಯದ ಮೇಲೆ ಬೀರುತ್ತಿರುವ ಕೆಟ್ಟ ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಎಸಿಎಫ್ ನಂದಗೋಪಾಲ್ ಮಾತನಾಡಿ, ಪ್ರಸ್ತುತ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಪರಿಸರದ ಮೇಲೆ ನಿತ್ಯ ನಡೆಯುತ್ತಿರುವ ಮಾನವನ ದೌರ್ಜನ್ಯ. ನದಿಗಳು ಬತ್ತುತ್ತಿದ್ದು, ಕಾಡು ನಾಶವಾಗುತ್ತಿದೆ. ಜೀವವೈವಿಧ್ಯತೆ ಕಡಿಮೆಯಾಗುತ್ತಿದೆ. ಹಾಗಾಗಿ ಇರುವ ಕಾಡನ್ನು ರಕ್ಷಿಸುವುದರ ಜತೆಗೆ ಕಾಡನ್ನು ಹೆಚ್ಚಿಸುವ ಕೆಲಸದಲ್ಲಿ ನಾವೂ ಭಾಗಿಯಾಗಬೇಕು, ಇಲ್ಲವಾದಲ್ಲಿ ಮುಂದಿನ ಪೀಳಿಗೆ ಬದುಕುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಜು.1 ರಿಂದ 7 ರವರೆಗೂ ಅರಣ್ಯ ಇಲಾಖೆಯಿಂದ ನವಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ತಾಲೂಕಿನಾದ್ಯಂತ 10 ಸಾವಿರ ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯದ ಯಳಂದೂರು ವಲಯದ ಆರ್‌ಎಫ್‌ಒ ನಾಗೇಂದ್ರ ನಾಯಕ್, ಪ್ರಭಾರ ಸಾಮಾಜಿಕ ಅರಣ್ಯ ವಲಯಾಧಿಕಾರಿ ಲಿಂಗರಾಜು, ರಂಗಸ್ವಾಮಿ, ಕೃಷ್ಣ ಶಾಲೆಯ ಶಿಕ್ಷಕರು ಹಾಜರಿದ್ದರು.