

ಜಮಖಂಡಿ: ಮಕ್ಕಳಿಗೆ ವೈವಿಧ್ಯಮಯ ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಿ ಅವರ ಪ್ರತಿಭೆ ಪ್ರೋತ್ಸಾಹಿಸುವುದು ವಾರ್ಷಿಕ ಸ್ನೇಹ ಸಮ್ಮೇಳನದ ಉದ್ದೇಶ ಎಂದು ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಹೇಳಿದರು.
ಬಸವಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 7ನೇ ವಾರ್ಷಿಕ ಸ್ನೇಹ ಸಮ್ಮೇಳನ ಬಸವ ಸಂಭ್ರಮ-2025ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇರೆ ಬೇರೆ ಹಿನ್ನೆಲೆಯುಳ್ಳ ಮಕ್ಕಳಿಗೆ ಒಂದೇ ವೇದಿಕೆಯಲ್ಲಿ ವಿವಿಧ ಸಂಪ್ರದಾಯ ಹಾಗೂ ಪರಂಪರೆಗಳ ಕುರಿತು ಅರಿವು ಮೂಡಿಸಿ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಲಗುತ್ತಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಎ.ಎಸ್. ಕಂದಗಲ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಮಕ್ಕಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದರು.
ಬಸವಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಐ. ಹೊಸಮಠ ಇದ್ದರು.
ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಜೇಸಾಬ ಶೇಖ ವಾರ್ಷಿಕ ವರದಿ ಓದಿದರು. ವಿದ್ಯಾರ್ಥಿನಿ ಸಾಕ್ಷಿ ಸಂಕ್ರಾವತ ಹಾಗೂ ದೈಹಿಕ ಶಿಕ್ಷಕ ಮುತ್ತುರಾಜ ಅಮ್ಮಣಗಿ ನಿರೂಪಿಸಿದರು. ಶಿಕ್ಷಕಿ ರೇಖಾ ಬುರ್ಲಿ ವಂದಿಸಿದರು.