ಪ್ರತಿಯೊಂದು ಗ್ರಾಪಂನಲ್ಲೂ ಸಂವಿಧಾನ ಜಾಗೃತಿ ಮೂಡಿಸಿ

mysore
Published on

ಮೈಸೂರು: ನಂಜನಗೂಡು, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಲಿದ್ದು, ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಜನರಿಗೆ ಸಂವಿಧಾನ ಕುರಿತು ಅರಿವು ಮೂಡಿಸುವ ಕೆಲಸ ಪರಿಣಾಮಕಾರಿ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಪಿಡಿಒ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಂವಿಧಾನ ಜಾಗೃತಿ ಜಾಥಾ ಆಚರಣೆ ಸಂಬಂಧ ಆನ್‌ಲೈನ್ ಮೂಲಕ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಂವಿಧಾನ ಜಾಥಾ ಯಶಸ್ವಿಯಾಗಿ ಮೂಡಿಬರಲು ಹಾಗೂ ಕಾರ್ಯಕ್ರಮದ ವೆಚ್ಚ ಭರಿಸಲು ಸರ್ಕಾರ ಪ್ರತಿ ಪಂಚಾಯಿತಿಗೆ 10 ಸಾವಿರ ರೂ. ಅನುದಾನ ನೀಡಿದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಹೆಚ್ಚು ಜನ ಸೇರುವ ಸ್ಥಳಗಳಾದ ಕೈಗಾರಿಕಾ ಪ್ರದೇಶ, ಚಾಮುಂಡಿ ಬೆಟ್ಟದಲ್ಲಿ ಭಕ್ತರಿಂದ ಸಂವಿಧಾನದ ಪೀಠಿಕೆಯನ್ನು ಓದಿಸಿ ಅವರಲ್ಲಿ ಅರಿವು ಮೂಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಸಂವಿಧಾನ ಪೀಠಿಕೆ ಹಾಗೂ ನಿರ್ದೇಶಕ ತತ್ವಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನಿರ್ದೇಶಿಸಿದರು.


ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ತೃತೀಯ ಲಿಂಗಿಗಳನ್ನೆಲ್ಲ ಒಟ್ಟುಗೂಡಿಸಿ ಜಾಥಾ, ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೇರುವ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ನಡೆಸಬೇಕು. ಎಪಿಎಂಸಿ ಮಾರುಕಟ್ಟೆ ಹಾಗೂ ನರೇಗಾ ಸ್ಥಳದಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಂಡು ರೈತರು ಹಾಗೂ ಕೈಗಾರಿಕಾ ಕಾರ್ಮಿಕರಿಗೂ ಸಂವಿಧಾನದ ಅರಿವು ಮೂಡಿಸಬೇಕು ಎಂದು ಹೇಳಿದರು.


ಸೈಕಲ್ ಜಾಥಾ, ಬೈಕ್ ಜಾಥಾ, ಎತ್ತಿನಗಾಡಿ ಮೆರವಣಿಗೆ , ಟ್ರ್ಯಾಕ್ಟರ್ ಜಾಥಾ ಮುಂತಾದವುಗಳ ಮೂಲಕ ಸಂವಿಧಾನದ ಜಾಗೃತಿ ಮೂಡಿಸಬೇಕು. ಜನರು ಹೆಚ್ಚಾಗಿ ಸೇರುವ ಕಡೆ ಅರಿವು ಮೂಡಿಸುವ ಕಾರ್ಯ ನಡೆಸುವುದರಿಂದ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಾಧ್ಯ ಎಂದು ಹೇಳಿದರು.


ಕಾರ್ಯಕ್ರಮ ಆಯೋಜಿಸುವಾಗ ಯಾವುದೇ ಕಾರಣಕ್ಕೂ ಗೊಂದಲ ಉಂಟಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.


ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ವಿಶ್ವವಿದ್ಯಾಲಯ ಹಾಗೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅರಿವು ಮೂಡಿಸುವ ವಿಚಾರ ಸಂಕಿರಣ, ಕಾಲೇಜು-ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಸಂವಿಧಾನ ಕುರಿತ ಪುಸ್ತಕ ಪ್ರದರ್ಶನ ಏರ್ಪಡಿಸಬೇಕು ಎಂದರು.


ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಉಪ ಕಾರ್ಯದರ್ಶಿ (ಆಡಳಿತ) ಸವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net