ಶುದ್ಧ ನೀರು ಬಳಸಲು ಜಾಗೃತಿ ಮೂಡಿಸಿ

water
ಮೂಡಿಗೆರೆ ತಾಪಂನಲ್ಲಿ ಗ್ರಾಪಂಗಳಿಗೆ ನೀರು ಪರೀಕ್ಷೆ ಕಿಟ್‌ನ್ನು ತಾಪಂ ಇಒ ಸಿ.ರಮೇಶ್ ವಿತರಿಸಿದರು. ಪ್ರಕಾಶ್, ಆರ್.ನಾಗರಾಜ್, ಪದ್ಮರಾಜ್ ಇತರರಿದ್ದರು.
Published on

ಮೂಡಿಗೆರೆ: ಶುದ್ಧ ಕುಡಿಯುವ ನೀರು ಬಳಕೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಾಪಂ ಇಒ ಸಿ.ರಮೇಶ್ ಹೇಳಿದರು.

ವಿವಿಧ ಇಲಾಖೆಯಿಂದ ತಾಪಂನಲ್ಲಿ ಏರ್ಪಡಿಸಿದ್ದ ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ ಎಂಬ ಅಭಿಯಾನದಲ್ಲಿ ಮಾತನಾಡಿ, ಜೆಜೆಎಂ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡುವ ಜತೆಗೆ ನೀರಿನ ಶುಚಿತ್ವಕ್ಕೆ ಎಚ್ಚರ ವಹಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಪಿಡಿಒಗಳಿಗೆ ಸೂಚಿಸಿದರು. ಜಲಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮೋಹನ್ ಮಾತನಾಡಿ, ಎಲ್ಲ ಗ್ರಾಪಂಗಳಿಂದ ಕುಡಿಯುವ ನೀರಿನ ಮೂಲಗಳಿಂದ ನೀರನ್ನು ವರ್ಷಕ್ಕೆ ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಬೇಕು. ನೀರಿನ ಟ್ಯಾಂಕ್‌ಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಪಂಪ್‌ಹೌಸ್, ವೈಯರಿಂಗ್ ಇತರ ಉಪಕರಣಗಳ ಸುಸ್ಥಿತಿ, ಕುಡಿಯುವ ನೀರಿನ ಪೈಪ್‌ಲೈನ್ ಪರೀಕ್ಷಿಸಿ ಹೊರಗಿನ ಯಾವುದೇ ನೀರು ಸೇರಿಕೊಳ್ಳದಂತೆ ನಿಗಾವಹಿಸಬೇಕು. ಪೈಪ್‌ಲೈನ್ ಸೋರಿಕೆ ಕಂಡುಬಂದಲ್ಲಿ ಕೂಡಲೇ ದುರಸ್ತಿ ಪಡಿಸಬೇಕೆಂದು ತಿಳಿಸಿದರು.ಜಾವಳಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಅಭಿಯಾನದ ಲೋಗೋ ಬಿಡುಗಡೆ ಮಾಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ನಾಗರಾಜ್, ತಾಪಂ ಸಹಾಯಕ ನಿರ್ದೇಶಕ ನವೀನ್‌ಕುಮಾರ್, ಪಿಡಿಒ ಪದ್ಮರಾಜ್, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net