ಆಧ್ಯಾತ್ಮಿಕ, ಮಾನವೀಯ ಮೌಲ್ಯಗಳ ಅರಿವು ಮೂಡಿಸಿ

20sri-1
Published on

ಶೃಂಗೇರಿ: ಶಿಕ್ಷಣದ ಜತೆ ಆಧ್ಯಾತ್ಮಿಕ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪಾಲಕರು ಹಾಗೂ ಶಿಕ್ಷಕರು ಅರಿವು ಮೂಡಿಸುವ ಅಗತ್ಯವಿದೆ ಎಂದು ಹರಿಹರಪುರ ಶ್ರೀಮಠದ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಡಾ.ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಬಿಆರ್‌ವಿ ಮಾಡೆಲ್ ಸ್ಕೂಲ್ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಎಂತಹ ಸಮಾಜ ನಿರ್ಮಿಸುತ್ತೇವೆ ಎಂಬುವುದು ಪ್ರತಿಯೊಬ್ಬ ವ್ಯಕ್ತಿಯನ್ನು ಅವಲಂಬಿಸಿದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಉನ್ನತ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮನಾಗಬೇಕು. ಆಗ ಮಾತ್ರ ಸಮಾಜದ ಉನ್ನತೀಕರಣ ಸಾಧ್ಯ ಎಂದರು.

ಕುಟುಂಬದ ಕ್ಷೇಮ ಪ್ರತಿಯೊಬ್ಬರ ಗುರುತರ ಜವಾಬ್ದಾರಿ.ನಮ್ಮ ಬದುಕನ್ನು ರೂಪಿಸುವ ಪಾಲಕರನ್ನು, ಹಿರಿಯರನ್ನು ನಾವು ಗೌರವಿಸುವ ಅವರನ್ನು ಜತನದಿಂದ ಕಾಪಾಡುವ ಹೊಣೆಗಾರಿಗೆ ಸರ್ವರ ಮೇಲಿದೆ. ವ್ಯಕ್ತಿ ತನ್ನ ಅಂತರಂಗದ ಸಾಮರ್ಥ್ಯ, ಪ್ರತಿಭೆ, ನೈತಿಕ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಹೊರಗೆ ವ್ಯಕ್ತಪಡಿಸಿದರೆ ಮಾತ್ರ ದೇಶಕ್ಕೆ ಉನ್ನತ ಸಂಸ್ಕೃತಿ ಲಭ್ಯವಾಗುತ್ತದೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿವಮೊಗ್ಗ ಶ್ರೀರಾಮಕೃಷ್ಣ ವಿದ್ಯಾಶ್ರಮ ಟ್ಟಸ್ಟ್‌ನ ಮುಖ್ಯಸ್ಥೆ ಶೋಭಾ ವೆಂಕಟರಮಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತ್ಯಾಗರಾಜ್, ಪಪಂ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ಶಾಲಾ ಸಮಿತಿ ಸದಸ್ಯರಾದ ಅಂಬಲಮನೆ ಸುಬ್ರಹ್ಮಣ್ಯ, ರಾಮೇಶ್ವರ್ ರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net