ಹಿಂದು ಹಬ್ಬ-ಹರಿದಿನಗಳ ಜಾಗೃತಿ ಮೂಡಿಸಿ

11 rtl 2
Published on

ರಟ್ಟಿಹಳ್ಳಿ: ಹಿಂದು ಧರ್ಮದ ಹಬ್ಬಗಳು, ಸಂಪ್ರದಾಯಗಳನ್ನು ತಪ್ಪದೆ ಆಚರಿಸಿಕೊಂಡು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿರುತ್ತದೆ ಎಂದು ಭಜರಂಗದಳದ ಜಿಲ್ಲಾ ಸಂಯೋಜಕ ರಾಮನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಭಜರಂಗದಳ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿವಸ ಮತ್ತು ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ರಾಧೆ-ಕೃಷ್ಣ ವೇಷ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ದೇಶವು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ. ನಮ್ಮ ಸಾಂಸ್ಕೃತಿಕ ಹಬ್ಬ ಹರಿದಿನಗಳನ್ನು ವಿಶಿಷ್ಟವಾಗಿ ಆಚರಿಸುವುದರ ಮೂಲಕ ಅವುಗಳ ಮಹತ್ವದ ಬಗ್ಗೆ ಯುವಕರಿಗೆ ಅರಿವು ಮೂಡಿಸಬೇಕು ಎಂದರು.

ಡಾ.ಮಂಜುನಾಥ ತಲ್ಲೂರ ಮಾತನಾಡಿ, ವಿಶ್ವ ಹಿಂದು ಪರಿಷತ್ ಭಜರಗಂದಳವು ಧರ್ಮದ ಸಂಘಟನೆ ಮತ್ತು ಜಾಗೃತಿಯೊಂದಿಗೆ ಅನೇಕ ಶೈಕ್ಷಣಿಕ, ಸಾಂಸ್ಕೃತಿಕ, ಗೋಶಾಲೆಗಳ ಬೆಳವಣಿಗೆ, ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಪಟ್ಟಣದಲ್ಲಿ ಮಕ್ಕಳು ಶ್ರೀ ಕೃಷ್ಣನ ಮತ್ತು ರಾಧೆಯ ವೇಷ ಧರಿಸಿ ಗಮನ ಸೆಳೆದರು. ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪುಸ್ತಕ, ಪೆನ್ಸಿಲ್ ಮತ್ತು ಮಹಿಳೆಯರಿಗೆ ಅರಿಷಿನ ಕುಂಕಮ ಬಟ್ಟಲು ವಿತರಣೆ ಮಾಡಲಾಯಿತು.

ಪರಿಷತ್ ತಾಲೂಕು ಅಧ್ಯಕ್ಷ ಮೃತ್ಯುಂಜಯ ಬಸವನಾಳಮಠ, ತಾಲೂಕು ಸಂಯೋಜಕ ಮೃತ್ಯುಂಜಯ ಬೆಣ್ಣಿ, ಸುರಕ್ಷಾ ಪ್ರಮುಖರು ನವೀನ ಮಾದರ, ಗಣೇಶ ಸುಣಗಾರ, ಆಕಾಶ ಪಾಟೀಲ, ಸಂಜನಾ ಸಾಳುಂಕೆ, ಸರೋಜ ಹುರಕಡ್ಲಿ, ಶಬರೀಷ, ಪಾಂಡು ಪವಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net