ಕೆಟ್ಟ ಆಲೋಚನೆಗಳ ವಿರುದ್ಧ ಶಾಲಾ ಮಟ್ಟದಲ್ಲಿ ಜಾಗೃತಿ ಮೂಡಿಸಲಿ

ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಜ್ಯೋತಿ ಲಕ್ಷ್ಮೀ ಬಾಬು, ಎಚ್.ಎಲ್.ಮುರಳೀಧರ್, ಸೋಮಶೇಖರ್, ವಿವೇಕ್ ವಿನ್ಸೆಂಟ್ ಪಾಯಸ್ ಇತರರು ಇದ್ದರು.
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಜ್ಯೋತಿ ಲಕ್ಷ್ಮೀ ಬಾಬು, ಎಚ್.ಎಲ್.ಮುರಳೀಧರ್, ಸೋಮಶೇಖರ್, ವಿವೇಕ್ ವಿನ್ಸೆಂಟ್ ಪಾಯಸ್ ಇತರರು ಇದ್ದರು.
Published on

ಪಾಂಡವಪುರ: ದೇಶದ ಯುವಕರನ್ನು ಬಾಧಿಸುತ್ತಿರುವ ನಿರುದ್ಯೋಗ ಸಮಸ್ಯೆ ವ್ಯಸನ ಮತ್ತು ದುಶ್ಚಟಗಳತ್ತ ದೂಡುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಣದಲ್ಲಿ ಶನಿವಾರ ಆಯೋಜಿಸಿದ್ದ ಗಾಂಧಿಸ್ಮತಿ, ಜನಜಾಗೃತಿ ಜಾಥಾ ಮತ್ತು ಪಾನಮುಕ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಯಾವ ರೀತಿ ಬದುಕುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಂಡು ನಾವು ಹೆಜ್ಜೆ ಹಾಕಬೇಕು. ಹಿಂದೆ ಮದ್ಯ ಸೇವನೆ ಮಾಡಿ ರಸ್ತೆಯಲ್ಲಿ ಓಡಾಡಿದರೆ ಆತನ ವ್ಯಕ್ತಿತ್ವ ಕುಂಠಿತವಾಗುತ್ತಿತ್ತು. ಇಂದು ಕುಡಿಯದಿದ್ದರೆ ತಪ್ಪು ಎಂಬ ಭಾವನೆಗೆ ಬಂದಿದ್ದೇವೆ. ಇಂತಹ ಆಲೋಚನೆಗಳಿಂದ ಮುಕ್ತರಾಗಲು ಶಾಲಾ-ಕಾಲೇಜು ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ಹಳ್ಳಿಗಳಲ್ಲೂ ಮಾದಕ ವಸ್ತುಗಳು ಮುಕ್ತವಾಗಿ ಸಿಗುತ್ತಿದೆ ಎಂಬುದೇ ವಿಪರ್ಯಾಸ. ದೇಶ ಕಟ್ಟಲು ಹಳ್ಳಿಗಳು ಸದೃಢಗೊಳ್ಳಬೇಕು. ಜತೆಗೆ ಯುವ ಸಮುದಾಯ ವ್ಯಸನಗಳಿಂದ ದೂರವಿದ್ದು ಸರಿ ದಾರಿಯಲ್ಲಿ ನಡೆಯಬೇಕಿದೆ. ಯುವಕರು ತಪ್ಪನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅರ್ಧ ಸಮಸ್ಯೆ ಬಗೆಹರಿದಂತೆ. ಮಾದಕ ವಸ್ತುಗಳು ಮುಕ್ತವಾಗಿ ಸಿಗದಂತೆ ಸರ್ಕಾರ ಇನ್ನೂ ಹೆಚ್ಚಿನ ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ಪ್ರತಿಯೊಬ್ಬ ನಾಗರಿಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ದೇವಸ್ಥಾನ, ಆಸ್ಪತ್ರೆ, ಶಾಲಾ-ಕಾಲೇಜುಗ ಳಿಗಿಂತ ದೇಶದಲ್ಲಿ ವೈನ್‌ಶಾಪ್‌ಗಳು ಹೆಚ್ಚಾಗಿದೆ. ಬೆಳಗಿನ ಉಪಾಹಾರಕ್ಕೂ ಮುನ್ನ ಬಾಗಿಲು ತೆರೆಯುವ ವೈನ್‌ಶಾಪ್‌ಗಳು ತಡರಾತ್ರಿವ ರೆಗೂ ಬಿಡುವಿಲ್ಲದೆ ನಡೆಯುತ್ತವೆ. ವೈನ್‌ಶಾಪ್‌ಗಳೆಲ್ಲವೂ ರಾಜಕಾರಣಿಗಳ ಹಿಡಿತದಲ್ಲಿರುವುದೇ ಇದಕ್ಕೆ ಕಾರಣ. ವಿಶ್ವದ ಎಲ್ಲ ದೇಶಗಳಿಗಿಂತ ಭಾರತದಲ್ಲಿ ಹೆಚ್ಚು ಕುಡುಕರಿದ್ದಾರೆ. ಅದಕ್ಕೆ ತಕ್ಕಂತೆ ಮದ್ಯ ಮಾರಾಟವಾಗುತ್ತಿದೆ ಎಂಬ ಸಮೀಕ್ಷೆ ಇದೆ. 40 ವರ್ಷದೊಳಗಿನ ಯುವಕ, ಯುವತಿಯರು ಮಾದಕ ವ್ಯಸನಿಗಳಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಐದು ದೀಪ ವೃತ್ತದಿಂದ ಜಾನಜಾಗೃತಿ ಜಾಥಾ ನಡೆಯಿತು. ಸ್ತಬ್ಧಚಿತ್ರ, ಗೊಂಬೆ ಗಾರುಡಿ, ಡೊಳ್ಳು, ಮುಂತಾದ ಕಲಾ ತಂಡಗಳೊಂದಿಗೆ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಾರ್ಯಕ್ರಮದಲ್ಲಿ ಪಾನಮುಕ್ತರನ್ನು ಸನ್ಮಾನಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಳ್ಳಿ ಸೋಮಶೇಖರ್, ಉಪಾಧ್ಯಕ್ಷ ಅಶ್ವಥ್‌ಕುಮಾರೇಗೌಡ, ನಿರ್ದೇಶಕ ಎಚ್.ಎಲ್. ಮುರಳೀಧರ್, ಯೋಜನಾಧಿಕಾರಿಗಳಾದ ಎಸ್.ಯಶವಂತ್, ಸರೋಜಾ, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು, ಎಸ್.ಎ.ಮಲ್ಲೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net