

ಬೆಂಗಳೂರು: ಸಂವಿಧಾನದ ಪೀಠಿಕೆ ಮತ್ತು ಪ್ರಸ್ತಾವನೆಯನ್ನು ಸಾರ್ವಜನಿಕರಿಗೆ ತಲುಪಿಸಲು ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಸಂವಿಧಾನದ ಆಶಯ, ಮೌಲ್ಯ ಹಾಗೂ ತತ್ವಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಕಾಂತರಾಜು ಪಿ.ಎಸ್ ತಿಳಿಸಿದರು.
ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾರತ ಸಂವಿಧಾನ ಅಂಗೀಕರಿಸಿಕೊಂಡು 75 ವರ್ಷದ ಅಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಕುರಿತು ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ 84 ಗ್ರಾಮ ಪಂಚಾಯತಿ, 11 ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಲ್ಲಿ ಜ.26ರಿಂದ ಸಂವಿಧಾನ ಜಾಗೃತಿ ಜಾಥ ಆರಂಭಗೊಂಡಿದೆ. ಈವರೆಗೆ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಗಳಲ್ಲಿ ಜಾಥಾ ಸಂಚರಿಸಿ, ಪ್ರಸ್ತುತ ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ, ಚಿಕ್ಕ ಬಾಣಾವಾರ, ಆಲೂರು ಗ್ರಾಮಗಳಲ್ಲಿ ಸಂಚರಿಸಲಿದೆ. ನಂತರ ಯಲಹಂಕ, ಪೂರ್ವ ತಾಲೂಕು ವ್ಯಾಪ್ತಿಯಲ್ಲಿ ಸಂಚರಿಸಿ, ಫೆ.23ರ ಸಂಜೆ ಬೆಂಗಳೂರು ಅರಮನೆ ಮೈದಾನವನ್ನು ತಲುಪಲಿದೆ ಎಂದು ಮಾಹಿತಿ ನೀಡಿದರು.
ವಿಚಾರಗೋಷ್ಠಿ ಏರ್ಪಾಡು:
ಫೆ.24 ಮತ್ತು 25ರಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಜಿಲ್ಲಾ ಮಟ್ಟದಿಂದ ಬಂದಿರುವಂತಹ ಸ್ಥಬ್ದಚಿತ್ರಗಳ ಪ್ರದರ್ಶನ ಹಾಗೂ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ರೆಡ್ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.