ತೀವ್ರ ಅತಿಸಾರ ಬೇಧಿ ನಿಯಂತ್ರಿಸಲು ಜನರಲ್ಲಿ ಜಾಗೃತಿ ಮೂಡಿಸಿ: ಸಿಇಓ

raichur
raichur
Published on

 ರಾಯಚೂರು ತೀವ್ರ ಅತಿಸಾರ ಬೇಧಿ ನಿಯಂತ್ರಣಕ್ಕಾಗಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಪಂ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಸಂಕ್ರಾಮಿಕ ರೋಗಗಳ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಅತಿಸಾರ ಬೇಧಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. 0-5 ವರ್ಷದೊಳಗಿನ ಮಕ್ಕಳಿಗೆ ಓಆರ್‌ಎಸ್ ಪ್ಯಾಕೆಟ್ ವಿತರಿಸುವಂತೆ ತಿಳಿಸಿದರು. ಸಾರ್ವಜನಿಕರಲ್ಲಿ ವೈಯಕ್ತಿಕ ಶುಚಿತ್ವ ಕಾಪಾಡಲು, ಶೌಚಾಲಯ ಬಳಸುವ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ, ಅಂಗನವಾಡಿ ಮೇಲ್ವಿಚಾರಕರಿಗೆ ಶಾಲಾ ಕಾಲೇಜಗಳಲ್ಲಿ ಕೈತೊಳೆಯುವ ವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಶುಚಿತ್ವ ಕಾಪಡಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳ ತಜ್ಞ ಡಾ.ಸಂಜೀವ ಚಟ್ಟಿ ಮಾತನಾಡಿ, 0-5 ವರ್ಷದ ಮಕ್ಕಳಲ್ಲಿ ತೀವ್ರತರ ಅತೀಸಾರ ಬೇಧಿ ಆದಲ್ಲಿ ಮಕ್ಕಳು ನಿರ್ಜಲೀಕರಣಕ್ಕೆ ಒಳಗಾಗಿ ತುಂಬಾ ತೊಂದರೆ ಅನುಭವಿಸುತ್ತವೆ. ಅಂತಹ ಸಮಯದಲ್ಲಿ ಓಆರ್‌ಎಸ್ ದ್ರಾವಣ ಮತ್ತು ಜಿಂಕ್ ಔಷಧಿ ಬಳಸಬೇಕು. ಹಾಗೂ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆತರಲು ತಿಳಿಸಿದರು.

ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅತಿಸಾರ ಬೇಧಿ ನಿಯಂತ್ರಣ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಡಿಎಚ್‌ಓ ಡಾ.ಸುರೇಂದ್ರ ಬಾಬು, ಡಾ.ವಿಜಯ ಶಂಕರ, ಡಾ. ನಂದಿತಾ, ಡಿಡಿಪಿಐ ಡಾ. ಕೆ.ಡಿ ಬಡಿಗೇರ, ನವೀನ್ ಸೇರಿ ಜಿಲ್ಲಾ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net