

ಮುದಗಲ್: ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆ ಕಾಪಾಡುವುದರ ಜತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಿಎಚ್‌ಸಿ ವೈದ್ಯಾಧಿಕಾರಿ ಮಹೇಂದ್ರಗೌಡ ಪಾಟೀಲ್ ಆದಾಪುರ ಹೇಳಿದರು.
ಸಮೀಪದ ಮೆದಕಿನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆ.
ಹಾಗಂತ ಮಕ್ಕಳು, ಪಾಲಕರು ಆತಂಕಕ್ಕೆ ಒಳಗಾಗದೆ ಮುಂಜಾಗ್ರತೆವಹಿಸಬೇಕು. ರೋಗಲಕ್ಷಣಗಳ ಕಂಡುಬಂದಲ್ಲಿ ಆಸ್ಪತ್ರೆ ಸಂಪರ್ಕಿಸಬೇಕು. ಮಲೇರಿಯಾ ರೋಗ ತಡೆಗಟ್ಟಲು ನಮ್ಮ ಸುತ್ತ್ತಲಿನ ವಾತಾವರಣವನ್ನು ಸ್ವಚ್ಛವಿಟ್ಟುಕೊಳ್ಳಬೇಕು. ಪಾಲಕರಿಗೂ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು. ಆರೋಗ್ಯ ನಿರೀಕ್ಷಕ ಬಸವರಾಜ್ ಜೇಗರಕಲ್, ಮುಖ್ಯಶಿಕ್ಷಕ ಶಿವಪ್ಪ, ಆಶಾ ಕಾರ್ಯಕರ್ತೆಯರು ಇತರರಿದ್ದರು.