

ಕಡೂರು: ಪ್ರತಿ ಮತವೂ ಅಮೂಲ್ಯವಾಗಿದ್ದು ಎಲ್ಲರೂ ಚುನಾವಣಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು. ಕುಟುಂಬದ ಸ್ನೇಹಿತರು, ನೆರೆಹೊರೆಯುವರಿಗೆ ಮತದಾನದ ಜಾಗೃತಿ ಮೂಡಿಸಿ ಮತದಾನದ ಹಕ್ಕು ಚಲಾಯಿಸಲು ಪ್ರೇರೇಪಿಸಬೇಕು ಎಂದು ತಾಪಂ ಇಒ ಸಿ.ಆರ್.ಪ್ರವೀಣ್ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಮಂಗಳವಾರ ಚುನಾವಣಾ ಸ್ವೀಪ್ ಸಮಿತಿ ಮತ್ತು ಸಿಡಿಪಿಒ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ ಮತದಾನದ ಜಾಗೃತಿ ಜಾಥಾದಲ್ಲಿ ಮಾತನಾಡಿ, ಮತದಾನ ಹಕ್ಕಷ್ಟೇ ಅಲ್ಲ, ಕರ್ತವ್ಯವೂ ಹೌದು. ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದರು.
ಸಿಡಿಪಿಒ ಶಿವಪ್ರಕಾಶ್ ಮಾತನಾಡಿ, ಮತದಾನವನ್ನು ಹಬ್ಬದಂತೆ ಆಚರಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಜಾಗೃತಿ ಕುರಿತು ಜಾಥಾ ನಡೆಸಿದರು. ಕಡೂರು ಬಿಇಒ ಆರ್.ಸಿದ್ದರಾಜು ನಾಯ್ಕ ಹಾಗೂ ಸಿಡಿಪಿಒ ಇಲಾಖೆ ಸಿಬ್ಬಂದಿ ಇದ್ದರು.