ಬೆಳೆ ವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ

06-11-Shiva-1
ರಾಯಚೂರಿನ ಜಿ.ಪಂ. ಸಭಾಂಗಣದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ಪ್ರೊಬೇಷರಿ ಐಎಎಸ್ ಅಕಾರಿ ಸಾಹಿತ್ಯ ಆಲದಕಟ್ಟೆ ಇದ್ದರು.
Published on

ರಾಯಚೂರು: ಜಿಲ್ಲೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಿಕೊಂಡಿಲ್ಲ. ಕೇವಲ 52 ಸಾವಿರ ರೈತರು ಮಾಡಲು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದು, ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕೃಷಿ ಖಾತೆ ಸಚಿವ ಎನ್.ಚೆಲುವರಾಯಸ್ವಾಮಿ ಅಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರುಗಿದ ಕೃಷಿ ಇಲಾಖೆ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೊಲಿಸಿದಲ್ಲಿ ರಾಯಚೂರು ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿರುವ ರೈತರ ಪ್ರಮಾಣ ಕಡಿಮೆಯಾಗಿದೆ. ವಿಮೆ ಮಾಡಿಸುವುದರಿಂದ ಆಗುವ ಲಾಭವನ್ನು ರೈತರಿಗೆ ತಿಳಿಸಬೇಕು ಎಂದರು.
ರೈತರು ಶೇ.20ರಷ್ಟು ಹಣ ಕಟ್ಟಿದರೆ ಸರ್ಕಾರಿ ಶೇ.80ರಷ್ಟು ವಿಮಾ ಕಂತು ನೀಡುತ್ತಿದೆ. ಒಂದೆರಡು ಬಾರಿ ಬೆಳೆ ವಿಮೆ ಬಂದಿಲ್ಲ ಎನ್ನುವ ಕಾರಣಕ್ಕೆ ವಿಮೆ ಮಾಡಿಸದಿರುವುದರಿಂದ ರೈತರಿಗೆ ನಷ್ಟವುಂಟಾಗಲಿದೆ. ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿಯೂ ನೋಂದಣಿಗೆ ಪ್ರಚಾರ ಕಾರ್ಯ ನಡೆಸಬೇಕು.
ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ಹೆಚ್ಚಾಗಿದೆ. ಕಾಲುವೆ ಕೊನೆಭಾಗದ ರೈತರು ನೀರಿ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಜಲಾಶಯದಿಂದ ಮಳೆಗಾಲದಲ್ಲಿ ನದಿಗೆ ನೀರು ಹರಿಸುವ ಬದಲಾಗಿ ಕಾಲುವೆಗೆ ಹರಿಸಿದರೆ ಕೆರೆಗಳನ್ನು ತುಂಬಿಸಲು ಅನುಕೂಲವಾಗಲಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು.
ಹೆಚ್ಚಿನ ರಸಗೊಬ್ಬರ ಬಳಕೆಯಿಂದ ಭೂಮಿ ಸತ್ತ್ವ ಕಳೆದುಕೊಳ್ಳುತ್ತಿದ್ದು, ಸಾವಯವ ಗೊಬ್ಬರ ಬಳಕೆಗೆ ರೈತರು ಹೆಚ್ಚಿನ ಗಮನ ಹರಿಸಬೇಕು. ರೈತರಿಗೆ ರಸಾಯನಿಕ ಗೊಬ್ಬರ ಬಳಕೆಯಿಂದಾಗುವ ದುಷ್ಪರಿಣಾಗಳ ಕುರಿತು ತಿಳಿಸಿ ಜತೆಗೆ ನ್ಯಾನೋ ಯೂರಿಯಾ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು.
ಕಳಪೆ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟಕ್ಕೆ ಸಂಬಂಸಿದಂತೆ ನಿರಂತರವಾಗಿ ಪರಿಶೀಲನೆ ನಡೆಸಿ, ಕಳಪೆ ಕಂಡು ಬಂದಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಎನ್.ಚೆಲುವನಾರಾಯಣಸ್ವಾಮಿ ಹೇಳಿದರು.
ಸಭೆಯಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ಪ್ರೊಬೇಷರಿ ಐಎಎಸ್ ಅಕಾರಿ ಸಾಹಿತ್ಯ ಆಲದಕಟ್ಟೆ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net