ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸಿ

9
Published on

ಮೈಸೂರು: ಯಾವುದೇ ತಂಬಾಕು ಸಂಬಂಧಿತ ಉತ್ಪನ್ನಗಳಿಗೆ ನೀವು ದಾಸರಾಗದೆ, ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಶಿಲ್ಪಿ ಅರುಣ್ ಯೋಗಿರಾಜ್, ಯುವಕರಿಗೆ ಸಲಹೆ ನೀಡಿದರು.
ತಂಬಾಕು ವಿರೋಧಿ ದಿನದ ಅಂಗವಾಗಿ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯಿಂದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಸೈಕಲ್ ಜಾಥಾದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.
ತಂಬಾಕು ಸೇವನೆಯಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಆದ್ದರಿಂದ ಯುವಕರು ಸೇರಿದಂತೆ ಎಲ್ಲರೂ ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳಬೇಕು. ಯಾವುದೇ ತಂಬಾಕು ಸಂಬಂಧಿತ ಉತ್ಪನ್ನಗಳಿಗೆ ದಾಸರಾಗದೆ, ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸುವಬೇಕು ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತರಾಜ್ ಮಾತನಾಡಿ, ಆರೋಗ್ಯಕರ ದೇಶ ನಿರ್ಮಾಣವಾಗಲು ಆರೋಗ್ಯವಂತ ಜನರ ಅಗತ್ಯ ಇರುವುದರಿಂದ ಯುವಕರು ತಂಬಾಕು ಪದಾರ್ಥಗಳ ಬಳಕೆಯನ್ನು ಬಿಡಬೇಕು ಎಂದರು.
ಯುವಕರು ಆರೋಗ್ಯವಂತರಾಗದೆ ಇದ್ದಲ್ಲಿ ನಮ್ಮ ಸಮಾಜ ಆರೋಗ್ಯವಾಗಿರಲಿ ಎಂದು ನಿರೀಕ್ಷಿಸಲು ಹೇಗೆ ಸಾಧ್ಯ? ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಉತ್ತಮ ಅಭ್ಯಾಸಗಳನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಸೈಕಲ್ ಜಾಥಾ ಜಯ ಚಾಮರಾಜೇಂದ್ರ ವೃತ್ತ, ಗನ್ ಹೌಸ್, ಕಾರ್ಪೊರೇಷನ್ ವೃತ್ತದ ಮೂಲಕ ಸಾಗಿ ಕೋಟೆ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ಅಂತ್ಯಗೊಂಡಿತು.
ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ಸಲಹೆಗಾರ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಕೆ.ಜಿ. ಶ್ರೀನಿವಾಸ್, ಪೀಡಿಯಾಟ್ರಿಕ್ ಆಂಕೊಲಾಜಿಸ್ಟ್‌ಡಾ.ಸೌಮ್ಯಾ, ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ.ವಿಜಯ್ ಕುಮಾರ್, ಸಿಒಒ ಗೌತಮ್ ಧಮೇರ್ಲಾ, ಡಾ. ಅಗ್ನಿಕಾ ಅಜಯ್ ಕುಮಾರ್, ಮಾರುಕಟ್ಟೆ ಮುಖ್ಯಸ್ಥ ಆನಂದ್, ವಸಂತಕುಮಾರ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಬಿಎಚ್‌ಐಒ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net