

ಆಲೂರು : ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಆಲೂರು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತೀಮಾ ಮಾತನಾಡಿ, ಕೊಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಹೀನ ಕೃತ್ಯವಾಗಿದೆ. ಇದನ್ನು ಖಂಡಿಸುತ್ತೇವೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷವಾದರೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದೇಶದಲ್ಲಿ ಸರ್ಕಾರಗಳು ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ, ಭವಿಷ್ಯದಲ್ಲಿ ಇಂಥ ಘಟನೆ ತಡೆಗಟ್ಟಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ, ಮಹಿಳೆಯರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದೆ. ಇಂಥ ವಾತಾವರಣದಲ್ಲಿ ಮಹಿಳಾ ವೈದ್ಯರಿಗೆ ರಾತ್ರಿ ವೇಳೆ ಕೆಲಸ ಮಾಡಲು ಆದೇಶ ಮಾಡುವುದು ಸವಾಲಿನ ಕೆಲಸವಾಗಿದೆ. ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ಬಗ್ಗೆಯೇ ಹೆಚ್ಚಿಗೆ ಗಮನ ಹರಿಸಿದರೆ, ರೋಗಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಕಡಿಮೆಯಾಗುವ ಆತಂಕವಿದೆ. ಆದ್ದರಿಂದ ಸರ್ಕಾರಗಳು ಮಹಿಳಾ ವೈದ್ಯರಿಗೆ ಸುಸೂತ್ರವಾಗಿ ಕೆಲಸ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪ್ರತಿಭಟನೆಯಲ್ಲಿ ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ.ರಂಗನಾಥ್, ಡಾ.ಸತ್ಯನಾರಾಯಣ್ ಡಾ.ನವೀನ್ ಡಾ.ಶಿವಕುಮಾರ್ ಇತರರು ಇದ್ದರು.