ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ : ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

Bagadi gautha
Published on

ಮೈಸೂರು: ಶೈಕ್ಷಣಿಕ ಸಂಸ್ಥೆಯ ಆವರಣದೊಳಗೆ ಯಾವುದೇ ತಂಬಾಕು ಉತ್ಪನ್ನಗಳ ಬಳಕೆ ಆಗದಂತೆ ಕ್ರಮವಹಿಸಬೇಕು. ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಘೋಷಿಸಬೇಕು. ಎಲ್ಲ ಪ್ರಮುಖ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆ ಆವರಣದೊಳಗೆ ತಂಬಾಕು ಮುಕ್ತ ಪ್ರದೇಶ ಫಲಕ ಅಳವಡಿಸಬೇಕು. ಆವರಣದೊಳಗೆ ತಂಬಾಕು ಸೇವನೆಯಿಂದಾಗುವ ದುಷ್ಪಾರಿಣಾಮಗಳ ಕುರಿತು ಭಿತ್ತಿ ಪತ್ರ ಅಥವಾ ಇತರೆ ಜಾಗೃತಿ ಫಲಕಗಳ ಪ್ರದರ್ಶನಗಳನ್ನು ಮಾಡಬೇಕು ಎಂದರು.

ಜಿಲ್ಲೆಯಲ್ಲಿ ತಂಬಾಕು ಬೆಳೆಯನ್ನು ಬಿಟ್ಟು ಬೇರೆ ಪರ್ಯಾಯ ಬೆಳೆಯನ್ನು ಆಯ್ದುಕೊಂಡು ಮಾದರಿಯಾಗಿರುವ ರೈತರನ್ನು ಗುರುತಿಸಿ ಅವರಿಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರೋತ್ಸಾಹ ಧನವನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು. ಅಂತಹ ರೈತರನ್ನು ಇತರೆ ತಂಬಾಕು ಬೆಳೆಯುವ ರೈತರಿಗೆ ಪರಿಚಯಿಸಿ ಅದರ ವರದಿಯನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಸಲ್ಲಿಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net