

ಶೃಂಗೇರಿ: ಪ್ಲಾಸ್ಟಿಕ್ ಪ್ರಸ್ತುತ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಕಡಿಮೆ ದರದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳು ದೊರಕುವ ಕಾರಣ ಎಲ್ಲರೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಆದರೆ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರ, ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವು ಉಂಟಾಗಬೇಕು ಎಂದು ಕೊಪ್ಪದ ಪ್ರಗತಿಪರ ಕೃಷಿಕ ಅರವಿಂದ ಸಿಗದಾಳು ಹೇಳಿದರು.
ಪಟ್ಟಣದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಉಪಾಹಾರಗಳ ವಿತರಣಾ ಪರಿಕರಗಳ ಬ್ಯಾಂಕ್ ಕಾರ್ಯಕ್ರಮದಲ್ಲಿ ಸ್ಟೀಲ್ ಪರಿಕರಗಳ ಬಳಕೆ-ಅನಿವಾರ್ಯತೆ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಪ್ಲಾಸ್ಟಿಕ್‌ನಿಂದ ತಯಾರಿಸಿದ ಆನೇಕ ಉತ್ಪನ್ನಗಳಲ್ಲಿ ಪಾಲಿ-ಪ್ರೋರಿನೇಟೆಡ್, ಸೀಸದಂತಹ ಹಲವು ಅಪಾಯಕಾರಿ ರಾಸಾಯನಿಕ ವಸ್ತುಗಳು ಬಳಕೆಯಾಗುತ್ತಿದೆ. ಇದು ಪರಿಸರ ಹಾಗೂ ವ್ಯಕ್ತಿಯ ಆರೋಗ್ಯದ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ತಯಾರಿಕಾ ಹಂತದಲ್ಲಿ ದೊಡ್ಡಮಟ್ಟದ ಮಾಲಿನ್ಯ ಉಂಟು ಮಾಡುತ್ತದೆ ಎಂದರು.
ಚರ್ಮ, ಕಣ್ಣುಗಳಿಗೆ ಹಾನಿ, ಉಸಿರಾಟದ ತೊಂದರೆ, ಹಾರ್ಮೋನುಗಳ ವ್ಯತ್ಯಾಸ ಪ್ಲಾಸ್ಟಿಕ್ ಅಂಶ ದೇಹಕ್ಕೆ ಸೇರಿಕೊಂಡಾಗ ಕಾಣುವ ಆನಾರೋಗ್ಯಗಳು, ತಾಯಿ ಎದೆ ಹಾಲಿನಲ್ಲಿ ಪ್ಲಾಸ್ಟಿಕ್ ಕಣಗಳು ಕಂಡು ಬಂದಿದೆ. 100 ವರ್ಷ ಕಳೆದರೂ ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಎಂದಿಗೂ ನಾಶವಾಗುವುದಿಲ್ಲ. ಪ್ರಾಣಿ,ಪಕ್ಷಿ, ಜಲಚರದ ಜತೆಗೆ ಸಸ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಇಂತಹ ತ್ಯಾಜ್ಯಗಳನ್ನು ನಾವು ಬಳಕೆ ಮಾಡಬಾರದು. ಅದಕ್ಕೆ ಪರ್ಯಾಯವಾಗಿ ದೊರೆಯುವ ಪರಿಕರಗಳನ್ನು ಬಳಕೆ ಮಾಡಬೇಕು. ಪ್ಲಾಸ್ಟಿಕ್ ಹಾನಿ ಕುರಿತು ನಿರಂತರ ಜಾಗೃತಿ ಮೂಡಿಸಬೇಕು ಎಂದರು.
ಅಡುಗೆ ನಿರ್ವಾಹಕ ಸಂಘದ ಅಧ್ಯಕ್ಷ ರಮೇಶ್ ತಲಗಾರು, ಸಾಹಿತಿ ಎಂ.ಎಂ.ಪ್ರಭಾಕರ ಕಾರಂತ್ ಪರಿಕರಗಳ ಬ್ಯಾಂಕ್ ಉದ್ಘಾಟಿಸಿದರು. ಬಾಲಗಂಗಾಧರ್ ದೇವಾಲಯಗಳಿಗೆ ಸ್ಟೀಲ್ ಲೋಟಗಳನ್ನು ವಿತರಿಸಿದರು. ಉದ್ಯಮಿ ಉಮಾಕಾಂತ್, ಉಪ ಖಜಾನೆ ಅಧಿಕಾರಿ ಉಷಾ ಅವರನ್ನು ಗೌರವಿಸಲಾಯಿತು. ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್,ಸಂಘದ ಉಪಾಧ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಯು.ಎಸ್.ಶಿವಶಂಕರ್, ಪದಾಧಿಕಾರಿಗಳಾದ ಕವನಾ, ಪಪಂ ಉಪಾಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು.