

ಹುಣಸೂರು: ಕಟ್ಟೆಮಳಲವಾಡಿ ಗ್ರಾಮದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಮಾರಾಟ ಮಿತಿ ಮೀರಿದ್ದು, ಆರೋಗ್ಯ ಸಿಬ್ಬಂದಿ ವ್ಯಸನಗಳ ದುಷ್ಪರಿಣಾಮಗಳ ಕುರಿತು ಸತತ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಗ್ಧ ಜನರನ್ನು ವ್ಯಸನದ ಬಲೆಯಿಂದ ಹೊರತರಬೇಕೆಂದು ಬೆಳಕು ಸೇವಾ ಸಂಸ್ಥೆ ಮುಖ್ಯಸ್ಥ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.
ಕಟ್ಟೆಮಳಲವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟೆಮಳಲವಾಡಿ ಗ್ರಾಮದಲ್ಲಿ ಮಿತಿಮೀರಿದ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗಿ ಸಾವು-ನೋವುಗಳು ಹೆಚ್ಚಾಗುತ್ತಿದ್ದು, ಈ ಅವಘಡಗಳನ್ನು ತಪ್ಪಿಸಲು ಕಷ್ಟವಾಗುತ್ತಿದೆ. ಬೆಳಗಿನ ಜಾವದಿಂದಲೇ ಅಕ್ರಮ ಮದ್ಯ ಸುಮಾರು 20 ಮನೆಗಳಿಂದ ಜನರಿಗೆ ಕೈಗೆಟುಕುವಂತೆ ಮಾರಾಟವಾಗುತ್ತಿದ್ದು, ಇದರ ಜತೆಗೆ ಕೆ.ಆರ್.ನಗರ, ಹುಣಸೂರು ಭಾಗದಿಂದ ಕೆಲವು ಅಪರಿಚಿತರು, ಯುವಕರಿಗೆ ಗಾಂಜಾ ಮತ್ತು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲ ದಿನೇ ದಿನೆ ಹೆಚ್ಚುತ್ತಿದೆ. ಇದರಿಂದ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೇಸರಿಸಿದರು.
ಮದ್ಯ ವ್ಯಸನಿಗಳಾಗಿ ನಮ್ಮ ಕಣ್ಣೆದುರೇ ಚಿಕ್ಕ ವಯಸ್ಸಿನಲ್ಲೇ ಯುವಕರು ಮರಣ ಹೊಂದುತ್ತಿರುವುದು ಆತಂಕ ತಂದಿದೆ. ಅನೇಕ ಕುಟುಂಬಗಳು ರೋಗ-ರುಜಿನಗಳಿಂದ ತತ್ತರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯು ಗಂಭೀರವಾಗಿ ಪರಿಗಣಿಸಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮುಂದೆ ಆಗುವ ಸಾವು-ನೋವುಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ದಿನೇಶ್ ಮಾತನಾಡಿ, ಡೆಂೆ ಜ್ವರ ಸಮಾಜದಲ್ಲಿ ಹರಡುತ್ತಿದ್ದು, ಈ ಬಗ್ಗೆ ವಾರ್ಡ್, ಬೀದಿ ಬೀದಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನೀರು ನಿಲ್ಲದಂತೆ ಜನರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಸಾರ್ವಜನಿಕರು ಆಹಾರ ಸೇವನೆ ಮಾಡುವಾಗ ಪ್ರತಿದಿನವೂ ಬಿಸಿ ನೀರು ಸೇವನೆ ಮಾಡಬೇಕು. ಹಲಸಿದ ತಿಂಡಿ-ತಿನಿಸುಗಳು, ಎಣ್ಣೆ ಪದಾರ್ಥಗಳು, ಮಸಾಲೆ ಪದಾರ್ಥಗಳಿಂದ ದೂರವಿರಬೇಕು. ಡೆಂೆ ಜ್ವರ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಲ್ಲಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡಬೇಕು. ಆಗ ಮಾತ್ರ ಡೆಂೆ ಮಾರಕ ರೋಗ ತಡೆಗಟ್ಟಲು ಸಾಧ್ಯ. ಬೆಳಕು ಸೇವಾ ಸಂಸ್ಥೆಯ ಸಹಯೋಗದಲ್ಲಿ ವ್ಯಸನದ ದುಷ್ಪರಿಣಾಮಗಳನ್ನು ತಿಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಕ್ರಮವಹಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಆಂಜನೇಯ ಮಾತನಾಡಿದರು. ಗ್ರಾಪಂ ಸದಸ್ಯ ಎಸ್.ಗಣೇಶ್, ಆಸ್ಪತ್ರೆ ಸಿಬ್ಬಂದಿ ಕುಸ್ನಂಬಾನು, ಚೇತನ್, ನಿಸರ್ಗಾ, ಆಶಾ ಕಾರ್ಯಕರ್ತೆಯರಾದ ಇಂದಿರಮ್ಮ, ಶಾಂತಾ, ದಾಕ್ಷಾಯಣಿ ಭಾಗವಹಿಸಿದ್ದರು.