ದೌರ್ಜನ್ಯ ತಡೆ ಕಾಯ್ದೆ ಅರಿವು ಮೂಡಿಸಿ

ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿದರು.  ಡಿವೈಎಸ್‌ಪಿ ಗೋಪಾಲಕೃಷ್ಣ, ಕರೀಂ ರಾವತ್, ತಹಸೀಲ್ದಾರ್ ಮಂಜುನಾಥ್, ಮೋಹನಕುಮಾರಿ ಇದ್ದರು.
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿದರು. ಡಿವೈಎಸ್‌ಪಿ ಗೋಪಾಲಕೃಷ್ಣ, ಕರೀಂ ರಾವತ್, ತಹಸೀಲ್ದಾರ್ ಮಂಜುನಾಥ್, ಮೋಹನಕುಮಾರಿ ಇದ್ದರು.
Published on

 ಹುಣಸೂರು: ಮುಂದಿನ ಎರಡು ತಿಂಗಳಿನಲ್ಲಿ ಉಪವಿಭಾಗ ವ್ಯಾಪ್ತಿಯಲ್ಲಿ ದೌರ್ಜನ್ಯ ತಡೆ(ಅಟ್ರಾಸಿಟಿ)ಕಾಯ್ದೆ ಕುರಿತು ಶಾಲಾ-ಕಾಲೇಜುಗಳಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಸೂಚಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹುಣಸೂರು ಉಪವಿಭಾಗ ಮಟ್ಟದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಉಪವಿಬಾಗ ವ್ಯಾಪ್ತಿಯ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ 2024ರ ಜ.1ರವರೆಗೆ 21 ದೌರ್ಜನ್ಯ ಪ್ರಕರಣ ದಾಖಲಾಗಿವೆ. ಸಂವಿಧಾನ ದಿನಾಚರಣೆ ಸೇರಿದಂತೆ ವಿವಿಧ ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ದೌರ್ಜನ್ಯ ತಡೆ ಕುರಿತು ಮಾಹಿತಿ ನೀಡುತ್ತಿರುತ್ತೇವೆ. ಆದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಈ ವಿಷಯ ತಲುಪಬೇಕಿದೆ. ಹಾಗಾಗಿ ಎಲ್ಲ ತಾಲೂಕುಗಳಲ್ಲೂ ಮುಂದಿನ ಎರಡು ತಿಂಗಳೊಳಗೆ ಕನಿಷ್ಠ ಎರಡು ಜಾಗೃತಿ ಕಾರ್ಯಕ್ರಮ, ಜಾಥಾ ಅಥವಾ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಿಸುವ ಕಾರ್ಯಕ್ರಮಗಳನ್ನು ತಾಲೂಕು ಆಡಳಿತ ಆಯೋಜಿಸಿ ಡಿಸೆಂಬರ್ ಅಂತ್ಯದಲ್ಲಿ ಆಯೋಜನೆಗೊಳ್ಳುವ ಸಮಿತಿ ಸಭೆಯಲ್ಲಿ ವಿವರ ಮಂಡಿಸಬೇಕು ಎಂದು ಸೂಚಿಸಿದರು.

ರಾಜ್ಯಪಾಲರ ಕಚೇರಿ ಕದ ತಟ್ಟಬೇಕೆ?: ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನ ದಲಿತ ಮಹಿಳೆ ಪೂವಮ್ಮ ಬಂಗಾರು ಪ್ರಕರಣ ಕಳೆದೊಂದು ವರ್ಷದಿಂದ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಗುತ್ತಿದೆ. ಮದ್ಯದ ದೊರೆಯೊಬ್ಬರ ಕಿರುಕುಳದಿಂದಾಗಿ ದಲಿತ ಕುಟುಂಬ ತಮ್ಮ ಭೂಮಿ ಕಳೆದುಕೊಳ್ಳುವಂತಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರೂ ಅಮಾಯಕ ಮಹಿಳೆ ಕುಟುಂಬದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನಿಮ್ಮಿಂದ ನ್ಯಾಯ ಸಿಗುತ್ತಿಲ್ಲವೆಂದಾದರೆ ನಾವು ಇನ್ನೇನು ಮಾಡಲು ಸಾಧ್ಯ? ರಾಜ್ಯಪಾಲರ ಕಚೇರಿಯ ಕದ ತಟ್ಟಬೇಕೇ? ತನ್ನ ಪಾಲಿನ ಜಾಗವನ್ನು ಮಹಿಳೆಗೆ ದೊರಕಿಸಿಕೊಡಲು ಇಷ್ಟೊಂದು ಮೀನಮೇಷ ಏಕೆಂದು ಬೇಸರದಿಂದ ಪ್ರಶ್ನಿಸಿದರು.

ಈ ಕುರಿತು ಎಚ್.ಡಿ.ಕೋಟೆ ತಹಸೀಲ್ದಾರ್ ಶ್ರೀನಿವಾಸ್ ಮಾಹಿತಿ ನೀಡಿ, ಪೂವಮ್ಮ ಬಂಗಾರು ಅವರಿಗೆ ಈ ಭೂಮಿ ಮಂಜೂರಾಗಿಲ ್ಲವೆಂದು ಸಂಬಂಧಪಟ್ಟ ಇಲಾಖೆಯಿಂದ ಲಿಖಿತ ಮಾಹಿತಿ ದೊರಕಿದೆ. ಅಲ್ಲದೆ ಸದರಿ ಸರ್ವೇ ನಂಬರ್‌ನ ಕಡತ ಸಿಗುತ್ತಿಲ್ಲ. ಸೇಲ್ ಡೀಡ್ ಸಿಕ್ಕಲ್ಲಿ ಅದರಲ್ಲಿರುವ ಚೆಕ್ಕುಬಂದಿ ಮೂಲಕ ಇವರ ಜಮೀನನ್ನು ಗುರುತಿಸುವ ಕಾರ್ಯ ಆಗಬಹುದಾಗಿದೆ. ಆದರೆ ಅದೂ ದೊರಕಿಲ್ಲ. ಹಾಗಾಗಿ ಸಮಸ್ಯೆ ಉಳಿದಿದೆ ಎಂದರು. ಇದಕ್ಕೆ ದನಿಗೂಡಿಸಿದ ಉಪವಿಭಾಗಾಧಿಕಾರಿ, ಅಕ್ಕಪಕ್ಕದ ಜಮೀನಿನವರ ಬಳಿ ಅವರ ದಾಖಲೆಗಳನ್ನು ಪಡೆದು ಪರಿಶೀಲಿಸಿದ ಬಳಿಕ ಈ ಕುರಿತು ಸಮಗ್ರ ಮಾಹಿತಿ ನೀಡಿ ಎಂದು ಸೂಚಿಸಿದರು.

ಹೆಚ್ಚಿದ ಸಾರಾಯಿ ಅಂಗಡಿ: ತಾಲೂಕಿನಲ್ಲಿ ಅಕ್ರಮ ಮದ್ಯ ಮತ್ತು ಗಾಂಜಾ ಮಾರಾಟ ಎಗ್ತಿಲ್ಲದೆ ಸಾಗುತ್ತಿದೆ. ಅತಿ ಹೆಚ್ಚು ದಲಿತ ಕುಟುಂಬಗಳು ವಾಸವಿರುವ ಕಟ್ಟೆಮಳಲವಾಡಿ ಗ್ರಾಮದಲ್ಲಿ ಗಾಂಜಾ ಘಮಲು ಯುವಸಮೂಹವನ್ನು ಹಾಳುಗೆಡುವುತ್ತಿದೆ. ಆದರೂ ಅಬಕಾರಿ ಇಲಾಖೆಯವರು ಕ್ರಮ ವಹಿಸುತ್ತಿಲ್ಲ. ಕಾಫಿ, ಟೀ ಅಂಗಡಿಯಂತೆ ಸಾರಾಯಿ ಮತ್ತು ಗಾಂಜಾ ಅಂಗಡಿ ಮನೆಮನೆಯಲ್ಲಿ ತೆರೆದುಕೊಂಡಿವೆ. ಅಬಕಾರಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕೆಂದು ಸಮಿತಿ ಸದಸ್ಯ ಹೊಸೂರು ಕುಮಾರ್ ಆಗ್ರಹಿಸಿದರು.

ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಗ್ರಾಮದಲ್ಲಿ ಯುವಸಮೂಹ ಹಾಳಾಗಲು ಕಾರಣವಾಗುತ್ತಿದೆ ಎಂದು ನಿಂಗರಾಜ ಮಲ್ಲಾಡಿ ಆರೋಪಿಸಿದಾಗ, ಇಲಾಖೆ ವತಿಯಿಂದ ಪದೇ ಪದೆ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಮೂರು ಅಕ್ರಮ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. 4 ಪ್ರಕರಣಗಳಲ್ಲಿ ಗಾಂಜಾ ಸೊಪ್ಪುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಅಬಕಾರಿ ಡಿವೈಎಸ್‌ಪಿ ಎಂ.ಡಿ.ಮೋಹನ್‌ಕುಮಾರ್ ಹೇಳಿದರು.

ಉಪವಿಭಾಗಾಧಿಕಾರಿ ಮಾತನಾಡಿ, ಸತತವಾಗಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದರೆ ಅಂತಹವರನ್ನು ಗುರುತಿಸಿ ಗಡಿಪಾರು ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿರಿ ಎಂದು ಸೂಚಿಸಿದರು.

ಸಭೆಯಲ್ಲಿ ಹುಣಸೂರು ತಹಸೀಲ್ದಾರ್ ಮಂಜುನಾಥ್, ಉಪವಿಭಾಗ ವ್ಯಾಪ್ತಿಯ ಡಿವೈಎಸ್‌ಪಿ ಗೋಪಾಲಕೃಷ್ಣ, ಮೈಸೂರು ತಾಲುಕು ಡಿವೈಎಸ್‌ಪಿ ಕರೀಂ ರಾವತ್, ಸರಗೂರು ತಾಲುಕು ತಹಸೀಲ್ದಾರ್ ಮೋಹನಕುಮಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್, ರಾಮಸ್ವಾಮಿ ಸೇರಿದಂತೆ ವಿವಿಧ ತಾಲೂಕುಗಳ ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net