ವಿದ್ಯಾರ್ಥಿಗಳಲ್ಲಿ ಹವಾಮಾನ ಕುರಿತು ಜಾಗೃತಿ ಮೂಡಿಸಿ: ಪ್ರೀತಿ ಗೆಹ್ಲೋಟ್

bbmp preeti
Published on

ಬೆಂಗಳೂರು: ಹವಾಮಾನ ಕುರಿತು ಜಾಗೃತಿ ಮೂಡಿಸಿ ಉತ್ತಮ ವಾತಾವರಣ ಹಾಗೂ ನಗರವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳನ್ನು ಭಾಗಿದಾರರನ್ನಾಗಿ ಮಾಡುವುದು ಹವಾಮಾನ ಕ್ರಿಯಾ ಬಳಗದ (ಎಫ್​ಇಸಿಸಿ) ರಚನೆಯ ಉದ್ದೇಶ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ನೌಕರರ ಭವನದಲ್ಲಿ ಪಾಲಿಕೆಯ ಹವಾಮಾನ ಕ್ರಿಯಾ ಕೋಶವು ಆಯೋಜಿಸಿದ್ದ ಬೆಂಗಳೂರು ಹವಾಮಾನ ಕ್ರಿಯಾ ಬಳಗಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಶಾಲೆ, ಮನೆ ಮತ್ತು ಸಮುದಾಯ ಮಟ್ಟದ ನಡವಳಿಕೆಯಲ್ಲಿ ಬದಲಾವಣೆ ತರಬೇಕಿದೆ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣದಂತೆ, ಹವಾಮಾನ ಜವಾಬ್ದಾರಿಯೂ ಸಹ ತಾನಾಗಿಯೇ ಬರುವ ಅಭ್ಯಾಸವಾಗಬೇಕು. ಇದುವರೆಗೆ 700ಕ್ಕೂ ಹೆಚ್ಚಿನ ಸರ್ಕಾರಿ ಹಾಗೂ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ನೋಂದಣಿ ಮಾಡಿಕೊಂಡಿದ್ದು, 73 ಸಂಸ್ಥೆಗಳಲ್ಲಿ ಕ್ರಿಯಾ ಬಳಗವನ್ನು ರಚಿಸಲಾಗಿದೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳಿಗಾಗಿ ಹವಾಮಾನ ಕ್ರಿಯಾ ಬಳಗದ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡುವ ಮಾರ್ಗದರ್ಶಕ ಕೈಪಿಡಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಿಎಂಸಿಎ ಸಹ ಸಂಸ್ಥಾಪಕಿ ಪ್ರಿಯಾ ಕೃಷ್ಣಮೂರ್ತಿ, ವಿವಿಧ ವಲಯಗಳ ಜಿಲ್ಲಾ ಉಪನಿರ್ದೇಶಕರು ಮತ್ತು ಜಿಲ್ಲಾ ಉಪಯೋಜನಾ ಸಂಯೋಜಕರು, ಮಕ್ಕಳ ನಾಗರಿಕ ಜಾಗೃತಿ ಚಳವಳಿ, ಹವಾಮಾನ ಶಿಕ್ಷಣ ತಜ್ಞರ ಜಾಲ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

ಪ್ರತಿನಿಧಿಗಳ ಪ್ರಮುಖ ಅನಿಸಿಕೆ/ಸಲಹೆ:

* ಬ್ಲೂ ಗ್ರೀನ್ ಅವಾರ್ಡ್ ಪರಿಸರ ಜಾಗೃತಿ, ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿ ತೋರುವಂತೆ ಮಾಡಿದೆ.

* ಕ್ರಿಯಾ ಬಳಗದ ಚಟುವಟಿಕೆಗಳಲ್ಲಿ ಭೌತಿಕ ಚಟುವಟಿಕೆ ಸೇರಿಸುವುದರಿಂದ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಬಹುದು.

* ಪರಿಸರ ಜಾಗೃತಿ ಕುರಿತಾಗಿ ಮಕ್ಕಳು ಮಾತ್ರವಲ್ಲದೇ ಪೋಷಕರ ಮನಸ್ಥಿತಿ ಬದಲಾಯಿಸುವ ಅವಶ್ಯಕತೆ ಇದೆ.

* ಶಾಲಾ-ಕಾಲೇಜು ಹೊರತಾಗಿ ಹೆಚ್ಚು ತ್ಯಾಜ್ಯ ಸೃಷ್ಟಿಸುವ ಕಾರ್ಖಾನೆ, ಆಸ್ಪತ್ರೆಗಳಲ್ಲಿ ಹವಾಮಾನ ಕ್ರಿಯಾ ಬಳಗ ರಚಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net