

ಬಾಳೆಹೊನ್ನೂರು: ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಬೇಕಾಗುವ ರಕ್ತದ ಬೇಡಿಕೆಯ ಅಗತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಶಿವಮೊಗ್ಗ ರೋಟರಿ ಮಿಡ್‌ಟೌನ್ ಚಾರಿಟಬಲ್ ರಕ್ತನಿಧಿ ಕೇಂದ್ರದ ವೈದ್ಯ ವಿವೇಕ್ ಉಡುಪ ಹೇಳಿದರು.
ಜೇಸಿಐ ಸಂಸ್ಥೆ ಹಾಗೂ ಶಿವಮೊಗ್ಗ ರೋಟರಿ ರಕ್ತ ನಿಧಿ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತವನ್ನು ದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವಕ್ಕೆ ಹೊಸ ಚೈತನ್ಯ ತುಂಬಬಲ್ಲದು. ಆತ ಮತ್ತೊಮ್ಮೆ ಆರೋಗ್ಯವಂತನಾಗಿ ಜೀವಿಸಬಲ್ಲನು. ನಿರಂತರವಾಗಿ ರಕ್ತದಾನ ಮಾಡುವುದರ ಮೂಲಕ ಜನ್ಮದಿನ, ವಾರ್ಷಿಕೋತ್ಸವ ಮತ್ತು ಇನ್ನಿತರೆ ಸಂದರ್ಭದಲ್ಲಿ ಸ್ಮರಣೀಯವಾಗಿ ಆಚರಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ರಕ್ತದಾನ ಮತ್ತೊಬ್ಬ ವ್ಯಕ್ತಿಯ ಜೀವನಕ್ಕೆ ಹೊಸ ಚೈತನ್ಯ ತುಂಬಬಲ್ಲದು. ರಕ್ತದಾನ ಬಹಳ ಶ್ರೇಷ್ಠದಾನವಾಗಿದೆ ಎಂದರು.
ರಕ್ತದಾನ ಶ್ರೇಷ್ಠವಾಗಿದ್ದು, ನಿತ್ಯವೂ ರಕ್ತದ ಅವಶ್ಯಕತೆಯಿರುವ ರೋಗಿಗಳು ಹಲವರು ಇದ್ದಾರೆ. ಶಿವಮೊಗ್ಗ ರಕ್ತನಿಧಿ ಕೇಂದ್ರದಲ್ಲಿ ತಿಂಗಳಿಗೆ 1,500 ಯುನಿಟ್ ರಕ್ತದ ಅವಶ್ಯಕತೆಯಿದೆ. ರಕ್ತದಾನದ ಕುರಿತು ಜಾಗೃತಿ ಮೂಡಿಸಿ ಹೆಚ್ಚು ರಕ್ತದಾನ ನಡೆಯುವಂತೆ ಮಾಡಬೇಕಿದೆ ಎಂದರು.
ಪಿಎಸಿಎಸ್ ನಿರ್ದೇಶಕ ಬಿ.ಎ.ರಾಜಪ್ಪಗೌಡ ಮಾತನಾಡಿ, ಜೇಸಿ ಸಂಸ್ಥೆಯು ಸಾರ್ವಜನಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಯುವ ಜನರನ್ನು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗುವಂತೆ ಮಾಡುತ್ತಿದೆ. ಜೇಸಿ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಜನರು ಬೆಳೆಯುವಂತೆ ಮಾಡಿ ದೇಶವೂ ಬೆಳೆಯುವಂತೆ ಮಾಡುತ್ತಿದೆ. ದೇಶವನ್ನು ಯುವಕರು ಹೇಗೆ ಮುನ್ನಡೆಸಿ ವಿಶ್ವಪ್ರಸಿದ್ಧಿಯಾಗುವಂತೆ ಮಾಡಬೇಕು ಎಂಬುದನ್ನು ಕಲಿಸುತ್ತಿದೆ. ಸಮಾಜ ಸೇವೆಯ ಭಾಗವಾಗಿ ರಕ್ತದಾನ ಶಿಬಿರ ಆಯೋಜಿಸಿ ಮಾದರಿಯಾಗಿದೆ.
ದೇಶದ ಅಭಿವೃದ್ಧಿಗೆ ಪೂರಕವಾಗಿ, ಮಾನವೀಯ ಮೌಲ್ಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಜೇಸಿ ಸಂಸ್ಥೆಯಾಗಿದೆ. ಯುವ ಸಮೂಹದೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಶ್ಲಾಸಿದರು.
ಜೇಸಿಐ ಅಧ್ಯಕ್ಷ ಎನ್.ಶಶಿಧರ್, ಬನ್ನೂರು ಗ್ರಾಪಂ ಮಾಜಿ ಅಧ್ಯಕ್ಷೆ ಮಧುರಾ ರಾಜಪ್ಪಗೌಡ, ಜೇಸಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ಕಾರ್ಯದರ್ಶಿ ಶಜಿತ್ ಹುಯಿಗೆರೆ, ಕಾರ್ಯಕ್ರಮ ನಿರ್ದೇಶಕ ವಿ.ಅಶೋಕ್ ಮತ್ತಿತರರು ಹಾಜರಿದ್ದರು.