ಪ್ರತಿಭೆಗಳಿಗೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ: ಶಾಂತ ಮಲ್ಲಿಕಾರ್ಜುನ ಸ್ವಾಮಿ

13adarshkdga1
Published on

ಮಡಿಕೇರಿ: ಚಿತ್ರಕಲೆ ಮಕ್ಕಳ ಭಾವನೆ ಮತ್ತು ಕಲ್ಪನೆಯನ್ನು ಅನಾವರಣಗೊಳಿಸಬಲ್ಲ ಉತ್ತಮ ಕಲಾಪ್ರಕಾರವಾಗಿದೆ. ಪ್ರತಿಭೆಗಳ ಅನಾವರಣಕ್ಕೆ ವೇದಿಕೆಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.


ಮಡಿಕೇರಿಯ ಮಹದೇವಪೇಟೆಯ ಎಸ್‌ಎಸ್ ಆಸ್ಪತ್ರೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಕ್ರೆಸೆಂಟ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.


ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಸ್ತುತ ದಿನಮಾನದ ವಿಷಯಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಕೃತಿಯೂ ಒಂದಾಗಿದೆ, ಪ್ರಕೃತಿಯನ್ನು ಉಳಿಸಿ ಬೆಳೆಸಲು ಪೋಷಕರು ಮಕ್ಕಳಿಗೆ ಪ್ರೇರಣೆಯನ್ನು ನೀಡಬೇಕು ಎಂದು ಕರೆ ನೀಡಿದರು.


ಚಿತ್ರಕಲೆಗೆ ದೊಡ್ಡ ಇತಿಹಾಸವಿದೆ, ಈ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಮಕ್ಕಳಲ್ಲಿರುವ ಚಿತ್ರಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಈ ರೀತಿಯ ಸ್ಪರ್ಧೆಗಳು ಹೆಚ್ಚು ಸಹಕಾರಿಯಾಗಿದೆ. ಮಕ್ಕಳ ದಿನಾಚರಣೆಯ ಹಿನ್ನೆಲೆ ಎಸ್‌ಎಸ್ ಆಸ್ಪತ್ರೆ ಅತಿ ಕಾಳಜಿಯಿಂದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಿಲ್ಪ ಸತೀಶ್, ಪ್ರತಿವರ್ಷ ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.


ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಮೆಡಿಕಲ್ ಕಾಲೇಜ್‌ನ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂ.ಎಸ್.ರೂಪೇಶ್ ಗೋಪಾಲ್, ಎಲ್ಲಾ ಸಮಾಜ ಮತ್ತು ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಇದೊಂದು ಉತ್ತಮ ಪ್ರಯತ್ನವಾಗಿದ್ದು, ಪ್ರತಿಭೆಗಳನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.


ಮೆಡಿಕಲ್ ಕಾಲೇಜ್‌ನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸತೀಶ್ ಶಿವಮಲ್ಲಯ್ಯ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯೆ ಕಲಾವತಿ, ಎಎಲ್‌ಜಿ ಕ್ರೆಸೆಂಟ್ ಸ್ಕೂಲ್ ನ ಟ್ರಸ್ಟಿ ಹಾಗೂ ನಿರ್ದೇಶಕ ಹನೀಫ್, ಶಾಲೆಯ ಉಪಪ್ರಾಂಶುಪಾಲ ಸುಲ್ಲಾಹ್ತ್, ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಗುರುನಾಥ ಪಾಲ್ಗೊಂಡಿದ್ದರು.


ತೇಜಶ್ರೀ, ರಶ್ಮಿ ಹಾಗೂ ಶ್ರದ್ಧಾ ಕಟ್ಟೆಮಾಡು ಪ್ರಾರ್ಥಿಸಿ, ಆರ್.ಕೆ ಲ್ಯಾಬ್ ಮಾಲೀಕ ಕೆ.ಎಸ್.ಪ್ರದೀಪ್ ಕುಮಾರ್ ಸ್ವಾಗತಿಸಿದರೆ, ತೇಜಸ್ ಗೌಡ ಹಾಗೂ ದಿಲೀಪ್ ನಿರೂಪಿಸಿ, ಆರ್.ಕೆ ಲ್ಯಾಬ್‌ನ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ಪ್ರದೀಪ್ ಕುಮಾರ್ ವಂದಿಸಿದರು. ಎಸ್‌ಎಸ್ ಆಸ್ಪತ್ರೆಯ ಸಿಬ್ಬಂದಿಗಳಾದ ಧರ್ಮಾವತಿ, ಹರ್ಷಿತಾ, ಮಾನಸ, ಅಕ್ಷಿತಾ ಹಾಗೂ ಚುಮ್ಮಿ ಉಪಸ್ಥಿತರಿದ್ದರು.


ವಿಜೇತರ ವಿವರ: ಎಲ್‌ಕೆಜಿಯಿಂದ ೧ನೇ ತರಗತಿವರೆಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ ಯುಕೆಜಿ ಎಎಲ್‌ಜಿ ಕ್ರೆಸೆಂಟ್ ಶಾಲೆಯ ದುಹಾ ಫಾತಿಮಾ(ಪ್ರ), ಕೇಂದ್ರೀಯ ವಿದ್ಯಾಲಯ ಕೊಡಗು ಶಾಲೆಯ ರಿಥ್ವಿಕ್(ದ್ವಿ), ಕೊಡಗು ವಿದ್ಯಾಲಯದ ಶೌರ್ಯ ಕುಶಾಲಪ್ಪ ತೃತೀಯ ಬಹುಮಾನ ಪಡೆದುಕೊಂಡರು.


೨ನೇ ತರಗತಿಯಿಂದ ೬ನೇ ತರಗತಿ ವರೆಗಿನ ವಿಭಾಗದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ಕೆ.ಪಿ.ಬಿನೀತ್(ಪ್ರ), ಕೇಂದ್ರೀಯ ವಿದ್ಯಾಲಯದ ಎಂ.ಆರ್.ಕಿರಣಕಾಂತ್(ದ್ವಿ), ಸಂತ ಮೈಕಲರ ಶಾಲೆಯ ಕೆ.ಎಸ್.ಬಾನ್ವಿ ತೃತೀಯ ಬಹುಮಾನ ಪಡೆದುಕೊಂಡರು. ೭ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿಭಾಗದಲ್ಲಿ ಮಡಿಕೇರಿಯ ಸಂತ ಜೋಸೆಫರ ಶಾಲೆಯ ಹರ್ಷಿತ್ ಪೊನ್ನಪ್ಪ(ಪ್ರ), ಜಿ.ಪಿ.ಮೌಲ್ಯ(ದ್ವಿ), ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ಧ್ರುವ ನಂಜಪ್ಪ ತೃತೀಯ ಬಹುಮಾನ ಪಡೆದುಕೊಂಡರು.


ಪ್ರತಿ ವಿಜೇತರಿಗೆ ನಗದು ಬಹುಮಾನದೊಂದಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಸುಮಾರು ೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಎಲ್ಲರಿಗೂ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net