

ಮೈಸೂರು: ದೇಶದಲ್ಲಿ ಈಗಾಗಲೇ ಹಲವಾರು ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿದ್ದು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ಎಂದು ಹೇಳಿದರು.
ನಗರದ ಅಶೋಕಪುರಂನ ಕೇಂದ್ರಿಯ ರೈಲ್ವೆ ಕಾರ್ಯಾಗಾರದ ಕನ್ನಡ ಸಂಘದ ಕಚೇರಿ ಆವರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೈಋತ್ಯ ರೈಲ್ವೆ ನೌಕರರ ಕನ್ನಡ ಸಂಘದ ವತಿಯಿಂದ ಅನ್ಯ ಭಾಷೆಯ ರೈಲ್ವೆ ನೌಕರರಿಗೆ ಕನ್ನಡ ಕಲಿಕಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಕನ್ನಡ ಭಾಷೆ ವಿಷಯದಲ್ಲಿ ಅನುತ್ತೀರ್ಣಗೊಂಡಿರು ವುದು ಬೇಸರದ ಸಂಗತಿ. ಕರಾವಳಿ ಭಾಗದ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ, ಮೈಸೂರು, ಮಂಡ್ಯ ಭಾಗದ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಅನುತ್ತೀರ್ಣಗೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.
ಕುವೆಂಪು ಬದುಕಿದ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಳಿದ, ಬಿ.ಎಂ ಶ್ರೀಕಂಠಯ್ಯ ಹಾಡಿದ ಕನ್ನಡಕ್ಕೆ ಪವಿತ್ರವಾದ ಮೈಸೂರು ಭಾಗದಲ್ಲಿ ಈ ದುಸ್ಥಿತಿ ಒದಗಿದ್ದು, ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅನುತ್ತೀರ್ಣವಾದ ಜಿಲ್ಲಾವಾರು ಶ್ರೇಣಿಯಲ್ಲಿ ಮೈಸೂರು 5 ಸ್ಥಾನದಲ್ಲಿದೆ ಎಂದು ಬೇಸವ್ಯಕ್ತಪಡಿಸಿದರು
ಕನ್ನಡ ತನ್ನ ನಾಡಿನಲ್ಲೇ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗುತ್ತಿಲ್ಲ. ಕನ್ನಡಿಗರೇ ವಲಸಿಗರ ಭಾಷೆ ಕಲಿತು ತಾವೇ ವಲಸಿಗರಾಗುತಿದ್ದಾರೆ. ವಲಸಿಗರಿಗೆ ಕನ್ನಡ ಕಲಿಕೆಯ ಅನಿರ್ವಾಯನ್ನು ನಾವು ಸೃಷ್ಟಿ ಮಾಡುತ್ತಿಲ್ಲ. ದೇಶದ ಹಲವಾರು ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 19,569 ಭಾಷೆಗಳಿವೆ. 22 ಭಾಷೆಗಳು ಸಂವಿಧಾನಿಕವಾಗಿ ರಾಜ್ಯ ಭಾಷೆಗಳಾಗಿ ಗುರುತಾಗಿದ್ದು, ಇವುಗಳ ರಕ್ಷಣೆಗೆ ಸಂವಿಧಾನದ ಕಾನೂನು, ಆಡಳಿತ, ರಾಜ್ಯಗಳು ನೆರವಾಗಿವೆ. ಇನ್ನುಳಿದ ಭಾಷೆಗಳ ಉಳಿವಿಗೆ ಯಾವುದೇ ಆಸರೆ ಇಲ್ಲ. ಭಾಷೆಗಳು ನಾಶವಾಗುತ್ತಿರುವುದು ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿ ಎಲ್ಲೆಡೆ ಕಂಡು ಬರುತ್ತಿರುವ ಸಮಸ್ಯೆಯಾಗಿದೆ ಎಂದರು.
ಪ್ರಭಲವಾದ ಭಾಷೆಗಳ ತಿಕ್ಕಾಟದಲ್ಲಿ ಸಣ್ಣ ಭಾಷೆಗಳು ಅಳಿಯುತ್ತಿವೆ. ಇವುಗಳ ರಕ್ಷಣೆಯನ್ನು ಸರ್ಕಾರ, ಜನರು, ಅಧಿಕಾರಿಗಳು, ಹೋರಾಟಗಾರರು ಮಾಡಬೇಕಿದೆ. ಒಂದು ಭಾಷೆ ಸತ್ತು ಹೋದರೆ, ಒಂದು ಸಂಸ್ಕೃತಿ ಸತ್ತಂತೆ. ಒಂದು ಸಮುದಾಯದ ಅಸ್ಮಿತೆಯಿರುವುದು ಅದರ ಭಾಷೆಯಲ್ಲಿ. ಭಾಷೆಗಳು ಭಾರತವನ್ನು ಬೃಹತ್ ದೇಶವಾಗಿಸಿದ್ದಲ್ಲದೆ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ದೇಶವನ್ನಾಗಿ ನಿರ್ಮಾಣ ಮಾಡಿವೆ ಎಂದು ಅಭಿಪ್ರಾಯಪಟ್ಟರು.
ಜಾಗತೀಕರಣದ ನಂತರ ಉದ್ಯೋಗವಕಾಶಗಳಿಂದ ಬೆಂಗಳೂರು ಪ್ರಂಪಚದಲ್ಲೇ ಮುಖ್ಯವಾದ ನಗರವಾಗಿ ಹೊರಹೊಮ್ಮಿದೆ. ಕರ್ನಾಟಕ ಹಿಂದಿನಿಂದಲೂ ಎಲ್ಲರನ್ನು ಒಳಗೊಂಡು ಬದುಕಿದೆ. ಭೌದ್ದ, ಜೈನ ಹಾಗೂ ಹಲವಾರು ಧರ್ಮಗಳಿಗೆ ಹೆಚ್ಚು ಪ್ರಾಶಸ್ತ್ಯ ದೊರೆತಿದ್ದು ಕರ್ನಾಟಕದಲ್ಲಿ ಮಾತ್ರ ಎಂದು ತಿಳಿಸಿದರು.
ಕರ್ನಾಟಕ ಸಂಸ್ಕೃತಿ ಅನೇಕ ಸಂಸ್ಕೃತಿಗಳ ಮಿಶ್ರಣ. ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಕಾರ್ಯನ್ಮೋಖರಾಗಬೇಕಿದೆ. ಅನ್ಯರಿಗೆ ಭಾಷೆಯ ಅವಶ್ಯಕತೆ ಸೃಷ್ಟಿಸಿ ಅವರನ್ನು ನಮ್ಮವರನ್ನಾಗಿಸಬೇಕಿದೆ. ಭಾಷೆಯ ಅನಿವಾರ್ಯತೆಯಿಲ್ಲದೇ ಹೋದರೆ ಎರಡು ಸಾವಿರ ಇತಿಹಾಸವಿರುವ ಕನ್ನಡ ಭಾಷೆ ನಿಧನವಾಗಿ ಕರಗಿ, ಮುಂದಿನ ನೂರು ವರ್ಷದಲ್ಲಿ ಕೇವಲ ಮಾತನಾಡುವ ಭಾಷೆಯಾಗಿ ಉಳಿಯುತ್ತದೆ ಎಂದು ಎಚ್ಚರಿಸಿದರು.
ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಕನ್ನಡ ಮತ್ತಯ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ಸಂಘದ ಅಧ್ಯಕ್ಷ ಬಸವಲಿಂಗಪ್ಪ, ರೈಲ್ವೆ ಕಾರ್ಯಾಗಾರದ ಉಪಮುಖ್ಯ ಕಾರ್ಮಿಕ ಅಧಿಕಾರಿ ಎಂ.ಜಿ ಮಾಯಾಗಣ್ಣ, ವಿದ್ಯುತ್ ಇಂಜಿನಿಯರ್ ಆರ್.ನಾಗರಾಜು ಹಾಗೂ ಇತರರು ಇದ್ದರು.