ಮಾನವ ಸರಪಳಿ ರಚಿಸಿ ಹಿಮೋಫಿಲಿಯಾ ಜಾಗೃತಿ

mysore
Published on

ಮೈಸೂರು: ರಕ್ತ ಹೆಪ್ಪುಗಟ್ಟುವಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟು ಮಾಡುವ ಹಿಮೋಫಿಲಿಯಾ ರೋಗ ಕುರಿತು ನಗರದಲ್ಲಿ ಶುಕ್ರವಾರ ಮಾನವವ ಸರಪಳಿ ಮುಖಾಂತರ ಜಾಗೃತಿ ಮೂಡಿಸಲಾಯಿತು.


ಹಿಮೋಫಿಲಿಯಾ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಮೈಸೂರು ಹಿಮೋಫಿಲಿಯಾ ಸೊಸೈಟಿ ವತಿಯಿಂದ ಕೆ.ಆರ್.ಆಸ್ಪತ್ರೆಯ ಸಹಯೋಗದಲ್ಲಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಈ ಜಾಗೃತಿ ಕಾರ್ಯ ನಡೆಯಿತು. ಸ್ಥಳದಲ್ಲೇ ರಕ್ತದಾನ ಶಿಬಿರ ಸಹ ನಡೆಯಿತು.


ಹೀಮೋಫೀಲಿಯಾ ಇದ್ದವರಿಗೆ ರಕ್ತಸ್ರಾವ ನಿಲ್ಲುವುದಿಲ್ಲ. ಅವರಿಗೆ ಒಂದು ಚಿಕ್ಕ ಗಾಯವಾದರೂ ಬಹಳ ರಕ್ತ ನಷ್ಟವಾಗುತ್ತದೆ. ಕೆಲವೊಮ್ಮೆ ತಿಳಿದಿರುವ ಅಥವಾ ಗುರುತಿಸಬಹುದಾದ ಕಾರಣವಿಲ್ಲದೆ ರಕ್ತಸ್ರಾವವು ಉಂಟಾಗಬಹುದು. ತಾಯಿಯಿಂದ ಮಗನಿಗೆ ಬಳವಳಿಯಾಗಿ ಬರುವ ಕಾಯಿಲೆ ಇದಾಗಿದೆ. ಎಕ್ಸ್ ಎಂಬ ವರ್ಣತಂತುಗಳಲ್ಲಿ ಈ ರೋಗ ಸಾಗಿಸಲ್ಪಡುವುದರಿಂದ ಇದು ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಿಗೆ ಈ ರೋಗ ಬರುವ ಸಾಧ್ಯತೆ ಕಡಿಮೆ. ಆದ್ದರಿಂದ ಈ ರೋಗಿಗಳು ಎಚ್ಚರಿಕೆ ಇರಬೇಕು ಎಂದು ಅರಿವು ಮೂಡಿಸಲಾಯಿತು.


ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ವಿ.ಗಾಯತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಎಚ್.ಆರ್.ರಾಜೇಶ್ವರಿದೇವಿ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ನರ್ಸಿಂಗ್ ವಿಭಾಗದ ಪ್ರಾಂಶುಪಾಲೆ ಡಾ.ಪುಷ್ಪಲತಾ, ಕೆಆರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಶೋಭಾ, ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಎಲ್.ನಯಾಜ್ ಪಾಷ, ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ಕುಸುಮಾ, ಸೊಸೈಟಿಯ ಅಧ್ಯಕ್ಷ ಡಾ.ಎಸ್.ಕೆ.ಮಿತ್ತಲ್, ಪದಾಧಿಕಾರಿಗಳಾದ ಓ.ಪ್ರತಾಪ್‌ಕುಮಾರ್, ಕೆ.ಬಿ.ಲಿಂಗಪ್ಪ, ಎನ್. ಮಹದೇವ, ಡಾ.ದೀಪಾ ಭಟ್, ಜಿ.ಪ್ರವೀಣ್‌ಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net