ನಕಲಿ ಖಾತೆ ತಯಾರಿಸಿ ಹೊಸ ಬಡಾವಣೆಗೆ ಅನುಮತಿ

21 mdg pressmeet 1
Published on

ಮೂಡಿಗೆರೆ: ಚುನಾಯಿತ ಸದಸ್ಯರನ್ನು ಆಹ್ವಾನಿಸದೆ ಜೂ.20 ರಂದು ಆಡಳಿತಾಧಿಕಾರಿಯೂ ಆದ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪಪಂ ಸಾಮಾನ್ಯ ಸಭೆ ನಡೆಸಿರುವ ಬಗ್ಗೆ ನಿರ್ಣಯ ಅಂಗೀಕರಿಸಿದಂತೆ ನಕಲಿ ನಡಾವಳಿ ತಯಾರಿಸಿ ಮುಖ್ಯಾಧಿಕಾರಿ ಒಬ್ಬರೇ ಸಹಿ ಮಾಡಿ ಹೊಸ ಬಡಾವಣೆಗೆ ಅನುಮತಿ ನೀಡಿ, ಅಕ್ರಮವಾಗಿ ನಿವೇಶನದ ಖಾತೆ ಮಾಡಿಕೊಟ್ಟು ಪಪಂ ಖಾತೆಗೆ ಕೋಟ್ಯಾಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಪಪಂ ಬಿಜೆಪಿ ಸದಸ್ಯ ಮನೋಜ್ ಕುಮಾರ್ ಆರೋಪಿಸಿದರು.

ಮೂಡಿಗೆರೆ ಕಂದಾಯ ಗ್ರಾಮದ ಸರ್ವೇ.ನಂ 54/2ರಲ್ಲಿ 1.10 ಎಕರೆ, ಸರ್ವೇ ನಂ.135/1 ರಲ್ಲಿ 1.12 ಎಕರೆ ಜಾಗವನ್ನು ವಸತಿ ಉದ್ದೇಶದ ನಿವೇಶನಕ್ಕಾಗಿ ಅಕ್ರಮ ನಡಾವಳಿ ತಯಾರಿಸಿ ಖಾತೆ ಮಾಡಿಕೊಟ್ಟಿದ್ದಾರೆ. ಅಲ್ಲದೇ ಸರ್ವೇ.ನಂ 135/2ರಲ್ಲಿ 2.13 ಎಕರೆ ಮತ್ತು ಸರ್ವೇ ನಂ. 43/13 ರಲ್ಲಿ ಅರ್ಧ ಎಕರೆ ಜಾಗವನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗಿದ್ದು, ಇದಕ್ಕೂ ಖಾತೆ ಮಾಡಲು ತಯಾರಿ ನಡೆದಿದೆ. ಇಬ್ಬರು ಹಿರಿಯ ಸದಸ್ಯರ ಒತ್ತಡದಿಂದ ಪಪಂ ಮುಖ್ಯಾಧಿಕಾರಿ ಏಕ ಪಕ್ಷಿಯ ತೀರ್ಮಾನ ತೆಗೆದುಕೊಂಡು ಪಪಂ ಖಾತೆಗೆ ಸೇರಬೇಕಾದ ಕೋಟ್ಯಂತರ ರೂ.ನಷ್ಟ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈಗ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯಲ್ಲಿ ಸೆ.25 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸುಳ್ಳು ನಡಾವಳಿ ಹಾಗೂ ಖಾಸಗಿ ನಿವೇಶನಕ್ಕೆ ಅಕ್ರಮವಾಗಿ ನಡಾವಳಿ ಸೃಷ್ಟಿಸುವ ಮೂಲಕ ಖಾತೆ ತಯಾರಿಸಿ ನೂತನ ಬಡಾವಣೆಗಳಿಗೆ ಅನುಮತಿ ನೀಡಿರುವ ಬಗ್ಗೆ ಬಿಜೆಪಿ ಸದಸ್ಯರು ಪ್ರಶ್ನಿಸಿದಾಗ ಹಾರಿಕೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ತನಿಖೆಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

6ನೇ ವಾರ್ಡ್‌ನಲ್ಲಿರುವ ಪಪಂ ಗೆ ಸೇರಿದ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಿ ಕೊಡಲು ನಡಾವಳಿ ಪುಸ್ತಕದಲ್ಲಿ ತಿದ್ದುಪಡಿ ಮಾಡಲಾಗಿದೆ. ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಿರುವ ಒಂದೇ ಕಟ್ಟಡದಲ್ಲಿ ಹೂವಿನ ಅಂಗಡಿಗಳನ್ನು ತೆರೆಯಲಾಗಿದೆ. ಪ್ರತಿ ಮಳಿಗೆ ಬಿಡ್ಡುದಾರರಿಂದ ತಲಾ 50 ಸಾವಿರ ರೂ. ಮುಂಗಡ ಹಣ ಪಡೆಯಲಾಗಿದೆ. ಎರಡು ಮಳಿಗೆ ಹಣವನ್ನು ಹಿರಿಯ ಸದಸ್ಯರಿಬ್ಬರೂ ಪಡೆದು ಪಪಂ ಖಾತೆಗೆ ಜಮಾ ಮಾಡದೆ ಕಬಳಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ 11 ಸದಸ್ಯರಿದ್ದಾರೆ. ಈ ಬಾರಿ ಕಾಂಗ್ರೆಸ್ ವಾಮಮಾರ್ಗದಲ್ಲಿ ಅಧಿಕಾರ ಹಿಡಿದು ಭ್ರಷ್ಟಾಚಾರ ನಡೆಸುತ್ತಿದೆ. ಇಬ್ಬರು ಹಿರಿಯ ಸದಸ್ಯರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಲೂಟಿ ನಡೆಯುತ್ತಿದೆ. ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಪಟ್ಟಣದ ಎಲ್ಲ ರಸ್ತೆಗಳು ಗುಂಡಿಗಳಾಗಿವೆ, ಚರಂಡಿಗಳು ಬಾಯಿ ತೆರೆದು ಅಪಾಯ ಆಹ್ವಾನಿಸುತ್ತಿದ್ದರೂ ಕೇಳುವವರಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net