

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಜಗತ್ತು ವೇಗವಾಗಿ ಮುನ್ನಡೆಯುತ್ತಿದ್ದು, ಅದರೊಡನೆ ನಾವು ಮುನ್ನಡೆಯುತ್ತ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಸ್ಫೂರ್ತಿಯಾಗಿರಬೇಕು ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.
ನಗರದ ನಿಡವಣಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಥಮ ಪಿಯುಸಿ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಉತ್ತಮ ವಿದ್ಯಾರ್ಥಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಡಾ. ಆನಂದ ಪಾಂಡುರಂಗಿ ಮಾತನಾಡಿ, ಕೇವಲ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಮಕ್ಕಳ ಕೌಶಲ ಹೆಚ್ಚಿಸಲು ಸಾಧ್ಯ. ಪ್ರತಿ ಮಗು ತನ್ನ ಗುರಿ ಸಾಧಿ-ಸಲು ಸತತ ಪ್ರಯತ್ನ ಮುಖ್ಯ. ಇಂದಿನ ಪೀಳಿಗೆಯ ಮಕ್ಕಳ ಮಾನಸಿಕ ಸ್ಥಿತಿ ಮತ್ತು ಖಿನ್ನತೆ, ಪರೀಕ್ಷೆ ಒತ್ತಡ ನಿಭಾಯಿಸುವ ಕುರಿತು ಮಾಹಿತಿ ನೀಡಿದರು.
ಶಂಕರ ಮುಗದ ಮಾತನಾಡಿ, ಕಷ್ಟಗಳಿಂದ ಪಾಠ ಕಲಿತು ಉನ್ನತ ಸ್ಥಾನ ಪಡೆದು ಸಮಾಜಕ್ಕೆ ಮಾದರಿಯಾಗಿ ಬದುಕಿ, ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಸಿಡಾಕ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಅಂಗಡಿ, ನಿವೃತ್ತ ಜಂಟಿ ನಿರ್ದೇಶಕ ಡಿ.ಎಂ. ನಿಡವಣಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ಪ್ರಭಾ ನಿಡವಣಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೀರ್ತಿ ಸಿದ್ದರಾಮಶೆಟ್ಟರ್, ಪ್ರೊ. ಸೌಮ್ಯ ಕೋಳೂರ, ಪ್ರೊ. ಇಂದಿರಾ ಕಲಭಾವಿ, ಪ್ರೊ. ಮಹಾಂತೇಶ ಸೊಗಲದ, ಪ್ರೊ. ಮಹಾಂತೇಶ ಬಡ್ಲಿ, ಪ್ರೊ. ಸಿದ್ದಾರ್ಥ ಶಿವಶರಣ, ಪ್ರೊ. ನಂದೀಶ ಕಡಕೋಳ, ಇತರರು ಇದ್ದರು.
ಅನುಪಮಾ ಸ್ವಾಗತಿಸಿದರು. ಕಲ್ಪನಾ ಮಡಕಟ್ಟಿ ಹಾಗೂ ನಾಗವೇಣಿ ಮಲ್ಲಾಪುರ ನಿರೂಪಿಸಿದರು. ಪ್ರಾಚಾರ್ಯ ರಾಜೇಶ್ವರಿ ಸುಣಗಾರ ವಂದಿಸಿದರು.