

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
‘ದೊಡ್ಡಾಸ್ಪತ್ರೆ’ ಎಂದೇ ಹೆಸರಾಗಿರುವ ಕೆ.ಆರ್.ಆಸ್ಪತ್ರೆಯ ನವೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದು ರೋಗಿಗಳಿಗೆ ವೈದ್ಯಕೀಯ ಸೇವೆಯನ್ನು ತ್ವರಿತವಾಗಿ ನೀಡಲು ತೊಡರುಗಾಲು ಆಗಿದೆ.
ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(ಎಂಎಂಸಿ ಆರ್‌ಐ) ಶತಮಾನೋತ್ಸವ ಅಂಗವಾಗಿ ವಿವಿಧ ನವೀಕರಣ ಮತ್ತು ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಸಂಸ್ಥೆಯ ಅಧೀನದಲ್ಲಿ ಬರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ, ಪಿಕೆಟಿಬಿ ಆಸ್ಪತ್ರೆ, ಶುಷ್ರೂಷಕಿಯರ ಹಾಸ್ಟೆಲ್ ದುರಸ್ತಿ ಸೇರಿದಂತೆ 89 ಕೋಟಿ ರೂ. ವೆಚ್ಚದಲ್ಲಿ 14 ಕಾಮಗಾರಿಗಳು ಚಾಲ್ತಿಯಲ್ಲಿವೆ. ಆದರೆ, ಕೆಲಸದ ವೇಗ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ನಿಧಾನ ಗತಿಯಲ್ಲಿ ಕಾಮಗಾರಿ ತೆವಳುತ್ತಿದೆ. ಮುಂದಿನ ಆಗಸ್ಟ್‌ನಲ್ಲಿ ನಡೆಯಲಿರುವ ಶತಮಾನೋತ್ಸವ ಸಮಾರಂಭದ ಹೊತ್ತಿಗೆ ಮುಗಿಯಲಿದೆಯೇ ಎಂಬ ಅನುಮಾನವನ್ನೂ ಮೂಡಿಸಿದೆ.
ಶತಮಾನೋತ್ಸವಕ್ಕೆ 2022ರ ಆಗಸ್ಟ್ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ವರ್ಷಪೂರ್ತಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಸಂಭ್ರಮಕ್ಕೆ ಆಮೆ ವೇಗದಲ್ಲಿ ಸಾಗಿರುವ ಕಾಮಗಾರಿ ಅಡೆತಡೆ ಉಂಟುಮಾಡುತ್ತಿದೆ.
ಚೆಲುವಾಂಬ ಆಸ್ಪತ್ರೆಯ ಸೀತಾರಂಗ ಮಕ್ಕಳ ಹೊರರೋಗಿಗಳ ವಿಭಾಗದ ಕೆಲಸ ಮಾತ್ರ ಮುಗಿದಿದ್ದು, ಸೇವೆ ಸಿಗುತ್ತಿದೆ. ಉಳಿದ ಕಾಮಗಾರಿಗಳೆಲ್ಲ ಪೂರ್ಣಗೊಳ್ಳಲು ಸಮಯ ಹಿಡಿಯಲಿದೆ.
ವಾರ್ಡ್‌ಗಳ ದುರಸ್ತಿ ಸಂದರ್ಭದಲ್ಲಿ ಅಲ್ಲಿರುವ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದ ವಾರ್ಡ್ ಅನ್ನು ಇದೇ ಮಾದರಿಯಲ್ಲಿ ಈಗಾಗಲೇ ಅಭಿವೃದ್ಧಿಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಉದ್ಘಾಟನೆ ಮಾಡಿದ್ದಾರೆ. ಕಾಮಗಾರಿ ಕಾರಣಕ್ಕೆ ರೋಗಿಗಳ ಚಿಕಿತ್ಸೆಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.
ಆದರೆ, ಅದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ರೋಗಿಗಳಿಗೆ ವೈದ್ಯಕೀಯ ಸೇವೆ ಕಲ್ಪಿಸಲು ಕೆಲ ಕಡೆ ಅಡ್ಡಿಯಾಗುತ್ತಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರೂ ಆರೋಗ್ಯ ಸೇವೆಗಳು ರೋಗಿಗಳಿಗೆ ತಲುಪಿಸಲಾಗುತ್ತಿಲ್ಲ. ಕೆಲ ಕಡೆ ಅಡಚಣೆಗೂ, ವಿಳಂಬಕ್ಕೂ ಕಾರಣವಾಗಿದೆ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಆದ್ದರಿಂದ ಕೆಲಸವನ್ನು ತ್ವರಿತವಾಗಿ ಮುಗಿಸಬೇಕು ಎಂಬುದು ರೋಗಿಗಳ ಆಗ್ರಹ.
ಹಣ ಬಿಡುಗಡೆ ವಿಳಂಬದಿಂದಾಗಿ ಕಾಮಗಾರಿಯೂ ತಡವಾಗಿದೆ. ಸದ್ಯಕ್ಕೆ 30 ಕೋಟಿ ರೂ. ಬಿಡುಗಡೆಯಾಗಿದೆ. ಬಾಕಿ ಹಣ ಬರಬೇಕಿದೆ. ಇದರಿಂದಾಗಿ ಕೆಲಸ ನಿಧಾನವಾಗಿದೆ. ಆದರೆ, ಸಚಿವ ಸಂಪುಟ, ಹಣಕಾಸು ಇಲಾಖೆಯಿಂದ ಒಮ್ಮೆ ಆಡಳಿತಾತ್ಮಕ ಅನುಮೋದನೆ ದೊರೆತರೆ ಹಣ ಬಿಡುಗಡೆ ಆಗುವುದು ನಿಶ್ಚಿತ. ಈ ವಿಷಯದಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಆದರೆ, ಕೆಲಸ ವಿಳಂಬಕ್ಕೆ ಇದುವೇ ಕಾರಣ ಎಂದು ಮೂಲಗಳು ತಿಳಿಸಿವೆ. ಮೊದಲು ಕಾಮಗಾರಿ ಮುಗಿಸಲು ಡಿಸೆಂಬರ್ ಗಡುವು ನೀಡಲಾಗಿತ್ತು. ಅದೀಗ ಮಾರ್ಚ್‌ಗೆ ವಿಸ್ತರಣೆಯಾಗಿದೆ. ಈ ಅವಧಿಯ ಒಳಗೂ ಕೆಲಸ ಪೂರ್ಣಗೊಳ್ಳುವುದು ಅನುಮಾನವೇ ಸರಿ. ಹೀಗಾಗಿ, ಜೂನ್ ಒಳಗೆ ಎಲ್ಲ ಕೆಲಸ ಮುಗಿಸಲು ಸಂಕಲ್ಪ ಮಾಡಲಾಗಿದೆ.
ಕೆ.ಆರ್.ಆಸ್ಪತ್ರೆಯ ಮುಖ್ಯ ಕಟ್ಟಡವಾದ ಹೊರರೋಗಿಗಳ ಕಟ್ಟಡವೇ ದುಸ್ಥಿತಿಗೆ ತಲುಪಿದೆ. ಕಟ್ಟಡದ ಗೋಪುರದ ಕಬ್ಬಿಣವೂ ತುಕ್ಕು ಹಿಡಿದಿದೆ. ಹಲವು ಕಡೆಗಳಲ್ಲಿ ಛಾವಣಿ ಕುಸಿದಿದೆ. ಕೆಲವೆಡೆ ಮಳೆ ನೀರು ಸೋರುತ್ತದೆ. ಕಿಟಕಿಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಇದರ ಪಕ್ಕದಲ್ಲಿರುವ ವಿಶೇಷ ವಾರ್ಡ್ ಸ್ಥಿತಿಯೂ ಶೋಚನೀಯವಾಗಿದೆ. ಅಸಮರ್ಪಕ ನಿರ್ವಹಣೆಯ ಶೌಚಗೃಹಗಳು ಹದಗೆಟ್ಟಿವೆ. ಎಲ್ಲ ಕಟ್ಟಡಗಳ ಛಾವಣಿಯಲ್ಲಿ ಮಳೆ ನೀರು ನಿಲ್ಲುತ್ತಿದೆ. ಆದ್ದರಿಂದ ಕಟ್ಟಡದ ಗೋಡೆಗಳು ಹಾಳಾಗಿವೆ. ಕಟ್ಟಡದ ಬಹುತೇಕ ಕಡೆಗಳಲ್ಲಿ ಗಿಡಗಂಟಿ ಬೆಳೆದುಕೊಂಡಿವೆ. ಆಸ್ಪತ್ರೆಯ ಎಲ್ಲ ಕಟ್ಟಡಗಳ ಬಹುತೇಕ ಕಡೆಗಳಲ್ಲಿ ನಲ್ಲಿ ನೀರು ಸೋರುತ್ತಿದೆ. ಸೋರಿಕೆಯಿಂದ ನೀರು ಪೋಲಾಗುವುದರೊಂದಿಗೆ ಕಟ್ಟಡಕ್ಕೆ ಹಾನಿಯೂ ಉಂಟಾಗುತ್ತಿದೆ. ಚಾಲ್ತಿಯಲ್ಲಿರುವ ಕಾಮಗಾರಿಯಿಂದ ಇದೆಲ್ಲವನ್ನೂ ದುರಸ್ತಿಗೊಳಿಸಿ ಹೊಸ ರೂಪ ನೀಡಬೇಕಿದೆ.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1924ರಲ್ಲಿ ಸ್ಥಾಪನೆ ಮಾಡಿದ ಈ ವೈದ್ಯಕೀಯ ಕಾಲೇಜು ಇದೀಗ ವಿಸ್ತಾರವಾಗಿ ಬೆಳೆದಿದೆ. ಇದರ ಅಧೀನದಲ್ಲಿ 1,200 ಹಾಸಿಗೆಗಳ ಸಾಮರ್ಥ್ಯದ ಕೆ.ಆರ್.ಆಸ್ಪತ್ರೆ, 420 ಹಾಸಿಗೆಗಳ ಸಾಮರ್ಥ್ಯದ ಚೆಲುವಾಂಬ ಆಸ್ಪತ್ರೆ, 375 ಹಾಸಿಗೆಗಳ ಸಾಮರ್ಥ್ಯದ ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆ, 150 ಹಾಸಿಗೆಗಳ ಸಾಮರ್ಥ್ಯದ ಪಿಕೆ ಟ್ರಾಮಾ ಕೇರ್ ಸೆಂಟರ್, 250 ಹಾಸಿಗೆಗಳ ಸಾಮರ್ಥ್ಯದ ಪಿ.ಕೆ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ. ಒಟ್ಟು 2,315 ಹಾಸಿಗೆಗಳಿವೆ. ನಿತ್ಯ ಹೊರರೋಗಿಗಳು 2600, ಒಳರೋಗಿಗಳು 300, ಶಸ್ತ್ರಚಿಕಿತ್ಸೆಗಳು 110, ಹೆರಿಗೆಗಳ ಸಂಖ್ಯೆ 35, ಡಯಾಲಿಸಿಸ್ 50 ಮತ್ತು 2500ರಿಂದ 3000 ವಿವಿಧ ಲ್ಯಾಬ್ ಪರೀಕ್ಷೆಗಳು ನಡೆಯುತ್ತಿವೆ. ಮೈಸೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಯ ರೋಗಿಗಳು ಇಲ್ಲಿಗೆ ಬರುತ್ತಾರೆ. ಆದ್ದರಿಂದ ವೈದ್ಯಕೀಯ ಸೇವೆ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕಿದೆ.
ಪಾರಂಪರಿಕ ಕಟ್ಟಡವಾದ ಕೃಷ್ಣರಾಜ ಆಸ್ಪತ್ರೆ ಕಟ್ಟಡದ ದುರಸ್ತಿ ಕೆಲಸವನ್ನು 15 ವರ್ಷ ಬಳಿಕ ಕೈಗೆತ್ತಿಕೊಳ್ಳಲಾಗಿದೆ. ಇದು ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. 2007ರ ವರೆಗೆ ಕಟ್ಟಡ ನಿರ್ವಹಣೆ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಅದು ಕೆಲ ಸಂದರ್ಭಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿದೆ. ಈಗ ಸಂಸ್ಥೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ನಂತರ ದೊಡ್ಡ ಮಟ್ಟದಲ್ಲಿ ನವೀಕರಣ ಕೆಲಸ ನಡೆಯುತ್ತಿರುವುದು ಇದೇ ಮೊದಲು.
ನವೀಕರಣ ಕಾಮಗಾರಿ ಪ್ರಗತಿಯಲ್ಲಿ ಇದೆ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಾಗದ ಕಾರಣ ಕೆಲಸ ಕೈಗೊಳ್ಳಲು ವಿಳಂಬ ಆಗಿತ್ತು. ಈಗ ಕೆಲಸ ನಡೆಯುತ್ತಿದೆ. ಮುಂದಿನ ಮಾರ್ಚ್ ಹೊತ್ತಿಗೆ ಎಲ್ಲ ಕೆಲಸ ಪೂರ್ಣಗೊಳಲಿದೆ.ಡಾ.ಕೆ.ಆರ್.ದಾಕ್ಷಾಯಿಣಿಡೀನ್ ಮತ್ತು ನಿರ್ದೇಶಕಿ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ