

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಹೊರವಲಯದ ಮುದ್ದೇಬಿಹಾಳ-ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಕ್ರೇನ್‌ನ ಹಿಂಬದಿ ಚಕ್ರ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ನಾಗರಹಾಳ ಗ್ರಾಮದ ಶಿವಪುತ್ರಪ್ಪ ಭಜಂತ್ರಿ (48) ಮೃತ. ತಿಂಡಿ, ತಿನಿಸು ಕಿರುಕುಳ ವ್ಯಾಪಾರಿಯಾಗಿದ್ದ ಶಿವಪುತ್ರಪ್ಪ, ನಾಲತವಾಡ ಪಟ್ಟಣದಲ್ಲಿ ತಿನಿಸು ಖರೀದಿಸಿ ತಮ್ಮೂರಿಗೆ ಹೋಗಲು ಬೈಕ್ ಮೇಲೆ ರಸ್ತೆ ಪಕ್ಕದಲ್ಲಿ ನಿಂತಿದ್ದರು.
ನಾಲತವಾಡದಿಂದ ನಾರಾಯಣಪುರ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕ್ರೇನ್‌ನ ಮುಂದಿನ ಚಕ್ರ ಬಡಿದಿದೆ. ಆಯತಪ್ಪಿ ರಸ್ತೆ ಮೇಲೆ ಬಿದ್ದ ಶಿವಪುತ್ರಪ್ಪ ಅವರ ಮೇಲೆ ಕ್ರೇನ್‌ನ ಮಧ್ಯದ ಚಕ್ರ ಹರಿದಿದೆ. ಸ್ಥಳಕ್ಕೆ ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪ್ಪರಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
ಕ್ರೇನ್ ಚಾಲಕ ಬಿಹಾರ ರಾಜ್ಯದ ಈಸ್ಟ್ ಚಂಪಾರಣ ಜಿಲ್ಲೆಯ ಮೋತಿಹರಿ ತಾಲೂಕಿನ ಹರದಿಯಾ ಗ್ರಾಮದ ಜುಲ್ಪೇಕರಅಲಿ ಹಪೀಜುಲ್ಲಾ ಮಿಯಾ ವಿರುದ್ಧ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.