

ತಿಪಟೂರು : ಅರ್ಚಕರ ಮೇಲಿನ ವೈಷಮ್ಯದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನೊಬ್ಬ ದೇವಾಲಯದ ವಸ್ತುಗಳಿಗೆ ಹಾನಿ ಮಾಡಿದ್ದಲ್ಲದೆ, 5 ದ್ವಿಚಕ್ರ ವಾಹನಗಳಿಗೆ ಬೆಂಕಿಯಿಟ್ಟು ದಾಂಧಲೆ ಮಾಡಿರುವ ಘಟನೆ ತಾಲೂಕಿನ ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಬೆಟ್ಟದ ಮೇಲೆ ಚಿಲ್ಲರೆ ಅಂಗಡಿ ಇಟ್ಟುಕೊಂಡಿರುವ ದೇವೇಗೌಡ (42) ದಾಂಧಲೆ ಮಾಡಿದವ. ಸಂಕ್ರಾಂತಿ ಹಬ್ಬದ ದಿನದಂದೇ ಬೆಳಗಿನ ಜಾವ 3 ಗಂಟೆಯಲ್ಲಿ ದೇವಸ್ಥಾನದ ಎದುರು ನಿಲ್ಲಿಸಿದ್ದ 5 ಬೈಕ್‌ಗಳಿಗೆ ಬೆಂಕಿ ಹಾಕಿ ಸುಟ್ಟಿದ್ದಾನೆ. ದೇಗುಲದ ವಸ್ತುಗಳಿಗೆ ಹಾನಿ ಮಾಡಿ, ಅರ್ಚಕರ ಮೇಲೆ ಸೇಡು ತೀರಿಸಿಕೊಂಡಿದ್ದಾನೆ. ಪಾರು ಪತ್ತೆದಾರರು ಕೊಟ್ಟ ದೂರಿನ ಮೇರೆಗೆ ಕಿಬ್ಬನಹಳ್ಳಿ ಠಾಣೆಯ ಸಿಬ್ಬಂದಿ ಆರೋಪಿ ದೇವೇಗೌಡನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಸಿಕೊಂಡಿದ್ದಾರೆ.
ಎಸಿ ಭೇಟಿ: ಅಪಾರ ಭಕ್ತ ಸಮೂಹ ಹೊಂದಿರುವ ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆ ದಾಂಧಲೆ ಆದ ಸುದ್ದಿ ತಿಳಿಯುತ್ತಿದ್ದಂತೆ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ ಹಾಗೂ ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿದರು. ದೇವಾಲಯಕ್ಕೆ ಆಗಿರುವ ಹಾನಿಯ ಬಗ್ಗೆ ಮಾಹಿತಿ ಪಡೆದರು. ಈ ದೇವಸ್ಥಾನ ಮುಜರಾಯಿ ಇಲಾಖೆಯ ಎ ದರ್ಜೆ ದೇಗುಲವಾಗಿದೆ. ಇದು ಉಪವಿಭಾಗಾಧಿಕಾರಿಗಳ ನಿಯಂತ್ರಣಕ್ಕೊಳಪಟ್ಟಿದೆ. ಹಿಂದಿನಿಂದಲೂ ಲಿಂಗಾಯತ ಸಮುದಾಯಕ್ಕೆ ಸೇರಿದ 6-7 ಕುಟುಂಬದವರು ಪಾಳಿಯಲ್ಲಿ ನರಸಿಂಹಸ್ವಾಮಿ ದೇಗುಲದ ಪೂಜೆ ಮಾಡುತ್ತಾರೆ. ಶನಿವಾರ ಬೆಳಗಿನ ಜಾವ ನಡೆದಿರುವ ದಾಂಧಲೆಗೆ ದೇಗುಲದ ಅರ್ಚಕರು ಹಾಗೂ ಅಂಗಡಿ ಮಾಲೀಕ ದೇವೇಗೌಡ ನಡುವಿನ ಮನಸ್ತಾಪ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ದೇವಾಲಯದ ಹುಂಡಿ ಹಣ ಎಣಿಕೆ ಮಾಡಿ, ಸಂಗ್ರಹವಾಗಿದ್ದ 13 ಲಕ್ಷ ರೂ. ಅನ್ನು ಬ್ಯಾಂಕಿಗೆ ಜಮೆ ಮಾಡಲಾಗಿದೆ. ಹುಂಡಿ ಹಣಕ್ಕೂ ಗಲಭೆಗೂ ಸಂಬಂಧವಿಲ್ಲ. ದೇಗುಲದ ಆಸ್ತಿಗೆ ಆಗಿರುವ ಹಾನಿ ಪರಿಶೀಲಿಸಿ ವರದಿ ನೀಡಲಾಗುವುದು. ದಾಂಧಲೆ ಮಾಡಿದಾತ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದು, ರಾತ್ರಿಯಿಡೀ ಬೆತ್ತಲೆಯಾಗಿ ಓಡಾಡುತ್ತಿದ್ದ ಎಂಬ ಮಾಹಿತಿ ಇದೆ. ದಿಗ್ವಿಜಯ್ ಬೋಡ್ಕೆ, ಉಪವಿಭಾಗಾಧಿಕಾರಿ ಅರ್ಚಕರ ಹಾಗೂ ಅಂಗಡಿಯವರ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಜಗಳ ಆಗುತ್ತಿರುತ್ತದೆ. ಇದನ್ನು ಬಗೆಹರಿಸಬೇಕು. ದೇಗುಲದ ಮೆಟ್ಟಿಲುದ್ದಕ್ಕೂ ಮದ್ಯದ ಬಾಟಲಿ ಒಡೆಯಲಾಗಿದೆ. ಇಲ್ಲಿಗೆ ಬಂದು ಹೋಗುವ ಭಕ್ತರ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಬೆಟ್ಟದ ಮೇಲೊಂದು ಪೊಲೀಸ್ ಔಟ್‌ಪೋಸ್ಟ್ ನಿರ್ಮಿಸಬೇಕು. ಲೋಕೇಶ್ವರ್, ತಿಪಟೂರು ಬಿಜೆಪಿ ಮುಖಂಡ