

ಆರ್.ಕೃಷ್ಣ ಮೈಸೂರು
ಆನ್‌ಲೈನ್ ವಹಿವಾಟು ಹೆಚ್ಚಾಗುತ್ತಿರುವಂತೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಭೇದಿಸುವುದು ಈಗ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಒಂದು ಪ್ರದೇಶದಲ್ಲಿ ಕುಳಿತು ರಾಜ್ಯ, ದೇಶ, ವಿದೇಶದಲ್ಲಿ ಇರುವಂತೆ ಆನ್‌ಲೈನ್ ವಹಿವಾಟು ನಡೆಸಿ ವಂಚನೆ ಮಾಡುವ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳನ್ನು ಬೆನ್ನತ್ತಿದರೂ ಅಪರಾಧಿಗಳು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೋವಾಗಿದೆ. ಒಂದೊಮ್ಮೆ ಅರೋಪಿಗಳು ಸಿಕ್ಕರೂ, ಸೂಕ್ತ ದಾಖಲೆ, ಆತನೇ ಕೃತ್ಯವೆಸಗಿದ್ದಾನೆ ಎನ್ನುವುದಕ್ಕೆ ಪುರಾವೆ ಒದಗಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಆರೋಪಿಗಳು ಸಿಕ್ಕಿ ಬಿದ್ದರೂ ಶಿಕ್ಷೆ ಕೊಡಿಸುವ ಪ್ರಮಾಣ ಕಡಿಮೆಯಾಗಿದೆ.
ಸೈಬರ್ ಅಪರಾಧ ನಿಯಂತ್ರಣ ಮತ್ತು ಪತ್ತೆಗೆ ಪ್ರತಿ ಜಿಲ್ಲೆಯಲ್ಲಿಯೂ ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಿ ವಿಶೇಷ ಪರಿಣಿಸಿ ಹೊಂದಿರುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸರ್ಕಾರ ಕ್ರಮವಹಿಸುತ್ತಿದ್ದರೂ, ಪೊಲೀಸರ ಕೈಗೆ ಸಿಕ್ಕ ಸೈಬರ್ ವಂಚಕರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಕೃತ್ಯವೆಸಗಿರುವವರು ದೂರದ ಹೊರ ರಾಜ್ಯ, ದೇಶದಲ್ಲಿ ಇರುವುದರಿಂದ ಅಲ್ಲಿಗೆ ಹೋಗಿ ಅವರು ಇರುವ ಸ್ಥಳವನ್ನು ಪತ್ತೆ ಮಾಡುವುದು ಸವಾಲಿನ ಕೆಲಸವಾಗಿದೆ. ಅಲ್ಲದೇ ದುಬಾರಿ ವೆಚ್ಚ ಕೂಡ. ಇದರಿಂದ ಪೊಲೀಸರು ಹೆಚ್ಚು ಶ್ರವಹಿಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸೈಬರ್ ವಂಚಕರು ಸಿಕ್ಕಿ, ಶಿಕ್ಷೆಯಾಗಿರುವ ಪ್ರಕರಣಗಳ ಸಂಖ್ಯೆ ಕೇವಲ 51 ಮಾತ್ರ. ಅಂದರೆ ಶೇ. 0.125 ರಷ್ಟು. ಒಂದೂವರೆ ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಸೈಬರ್ ವಂಚನೆ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಇದ್ದರೂ ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
ಸುಲಭವಾಗಿ ಹಣ ಸಂಪಾದನೆ ಮಾಡಬೇಕು ಎಂಬ ಶಿಕ್ಷಿತರ ಆಸೆಯನ್ನೇ ಬಂಡವಾಳವಾಗಿಸಿಕೊಂಡಿರುವ ಸೈಬರ್ ವಂಚಕರು ಎಲ್ಲಿಯೋ ಕುಳಿತು ಸೆಲೆಬ್ರಿಟಿಗಳ ಪ್ರೊಪೈಲ್ ಲೈಕ್, ಕಮೆಂಟ್, ಪ್ರವಾಸಿ ತಾಣಗಳಿಗೆ ರೇಟಿಂಗ್ ನೀಡಿದರೆ ಸಿಗುವ ಕಮಿಷನ್ ಆಸೆ, ಕ್ರಿಪ್ರೋ ಕರೆನ್ಸಿಯಲ್ಲಿ ಬಂಡವಾಳ ಹೂಡಿಕೆ ಹೀಗೆ ನಾನಾ ಮಾರ್ಗದ ಮೂಲಕ ಆನ್‌ಲೈನ್‌ನಲ್ಲಿ ವಂಚನೆ ಮಾಡುತ್ತಿದ್ದಾರೆ.
ವಂಚಕರ ದೂರವಾಣಿ ಸಂಖ್ಯೆಯ ಮೂಲಕ ವಿಳಾಸ ಪತ್ತೆಹಚ್ಚಿ ಹೊರಟರೆ ಅದು ದೇಶದ ಯಾವುದೋ ಮೂಲೆಯಲ್ಲಿರುವ ವಿಳಾಸ ತೋರಿಸಲಿದೆ. ಹೇಗೋ ವಿಳಾಸ ಪತ್ತೆ ಮಾಡಿದರೆ ಮೊಬೈಲ್ ಸಂಖ್ಯೆಯ ಮಾಲೀಕರೇ ಆ ವಿಳಾಸದಲ್ಲಿ ಇರುವುದಿಲ್ಲ. ಇನ್ನೂ ಸೈಬರ್ ವಂಚಕರು ವರ್ಗಾವಣೆ ಮಾಡಿಕೊಳ್ಳುವ ಬ್ಯಾಂಕ್ ಖಾತೆಯ ಮೂಲ ಬೆನ್ನತ್ತಿದ್ದರೆ ಅದರ ನಿಜವಾದ ಗ್ರಾಹಕರು ಬೇರೆಯಾಗಿದ್ದು, ವಂಚನೆಯಾದ ಹಣ ಕೈಗೆ ಸಿಗದೇ ಇರುವ ಮಟ್ಟಿಗೆ ವಿಲೇವಾರಿಯಾಗಿರುತ್ತದೆ. ದಾಖಲಾದ ಪ್ರಕರಣಗಳಲ್ಲಿ ಪೊಲೀಸರಿಗೆ ವಂಚಕರು ಬಳಸಿದ ಮೊಬೈಲ್ ಸಂಖ್ಯೆ ಸಿಕ್ಕರೂ ಅದರಿಂದ ಪ್ರಕರಣ ಪತ್ತೆ ಕಠಿಣವಾಗಿದೆ.
ಸೈಬರ್ ಕ್ರೈಂ ಪತ್ತೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿ ಇರದೇ ಇರುವುದು, ಅತ್ಯಾಧುನಿಕ ತಂತ್ರಜ್ಞಾನದಿಂದ ತನಿಖೆ ಸಾಧ್ಯವಾಗದೇ ಇರುವುದು ಅಪರಾಧ ಕೃತ್ಯದ ಮೂಲ ಪತ್ತೆ ಹಚ್ಚಲು ಇರುವ ತೊಡಕಾಗಿದೆ. ಅಲ್ಲದೇ ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನ ಅವಿಷ್ಕಾರಗೊಳ್ಳುತ್ತಿದ್ದು, ಪೊಲೀಸರಿಗೆ ಯಾಮಾರಿಸುಷ್ಟು ನಿಪುಣತೆಯನ್ನು ವಂಚಕರು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೊಲೀಸರಿಗೂ ತಂತ್ರಜ್ಞಾನ ನಿಪುಣತೆ ತರಬೇತಿ ನೀಡಬೇಕಿದೆ. ಜತೆಗೆ ಆಸಕ್ತಿ ಇರುವ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಬೇಕಿದೆ.
ಜನರು ಜಾಗೃತರಾಗಬೇಕಿದೆ
ನಾನಾ ಅಮೀಷಗಳನ್ನು ಒಡ್ಡುವ ಮೂಲಕ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜತೆಗೆ ವಿದ್ಯಾವಂತರೇ ಹೆಚ್ಚು ಇಂತಹ ಪ್ರಕರಣದಲ್ಲಿ ಸಿಲುಕುತ್ತಿರುವುದು ದುರಾದೃಷ್ಟಕರ. ಹಾಗಾಗಿ ವಿದ್ಯಾವಂತರು ಆನ್‌ಲೈನ್ ವಹಿವಾಟು ನಡೆಸುವಾಗ ಬಹು ಎಚ್ಚರಿಕೆಯಿಂದ ಇರಬೇಕು. ಪ್ರಕರಣ ಭೇದಿಸಲು ತರಬೇತಿ ನೀಡಿದರೂ, ವಂಚಕರು ನಾನಾ ಬಗೆಯ ತಂತ್ರಗಾರಿಕೆ ಬಳಸುವುದರಿಂದ ಪತ್ತೆ ಕಾರ್ಯ ಕಷ್ಟವಾಗುತ್ತಿದೆ.
ಬಿ.ರಮೇಶ್ ಬಾನೋತ್, ಪೊಲೀಸ್ ಕಮೀಷನರ್, ಮೈಸೂರು ನಗರ