ಪಟಾಕಿ ಮಾರಾಟಕ್ಕೆ ಬಿತ್ತು ಕಡಿವಾಣ

1
Published on

ಕಟ್ಟುನಿಟ್ಟಿನ ನಿಯಮದಿಂದ ಅತ್ತಿಬೆಲೆಯಲ್ಲಿ ವ್ಯಾಪಾರಿಗಳಿಗೆ ನಷ್ಟ | ದುರಂತದ ಬಳಿಕ ಎಚ್ಚೆತ್ತ ಆಡಳಿತ

ವಿಜಯವಾಣಿ ಸುದ್ದಿಜಾಲ ಆನೇಕಲ್

ಕಳೆದ ವರ್ಷ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 16 ಮಂದಿ ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಹಲವು ನಿರ್ಬಂಧ ಹೇರಿರುವುದು ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪಟಾಕಿ ದುರ್ಘಟನೆ ಬಳಿಕ ಅನಧಿಕೃತ ಪಟಾಕಿ ಮಳಿಗೆಗಳಿಗೆ ಅನುಮತಿ ನೀಡಿಲ್ಲ, ದುರಂತ ಸಂಭವಿಸಿದ ಮಳಿಗೆ ಅಕ್ಕಪಕ್ಕದಲ್ಲಿ ಪರವಾನಗಿ ಹೊಂದಿರುವ ಅಂಗಡಿ ಮಳಿಗೆಗಳು ಹಾಗೂ ಅತ್ತಿಬೆಲೆಯಿಂದ ಹೆಬ್ಬಗೋಡಿಯವರಿಗೆ ಹೆದ್ದಾರಿ ಪಕ್ಕದಲ್ಲಿರುವ 22 ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.

ತಾತ್ಕಾಲಿಕ ಮಳಿಗೆಗಳಿಗೆ ಅವಕಾಶ ನೀಡದಿರುವುದು ಈ ಬಾರಿ ಪಟಾಕಿ ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತಾತ್ಕಾಲಿಕ ಮಳಿಗೆಗಳಿಗೆ ಈ ಬಾರಿ ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಗ್ನಿಶಾಮಕ ಇಲಾಖೆ, ಪುರಸಭೆ ಅನುಮತಿ ನಿರಾಕರಿಸಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ 15 ದಿನಗಳ ಕಾಲ ತೆರೆಯುತ್ತಿದ್ದ ತಾತ್ಕಾಲಿಕ ಮಳಿಗೆಗಳಿಗೆ ಅನುಮತಿ ನಿರಾಕರಿಸಿದೆ.

ಪ್ರತಿ ವರ್ಷ ದೀಪಾವಳಿ ಹಬ್ಬದ ವೇಳೆ ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಗಳ ಅಬ್ಬರ ಜೋರಾಗಿರುತ್ತಿತ್ತು, 40 ರಿಂದ 50 ಅಂಗಡಿಗಳನ್ನು ಅತ್ತಿಬೆಲೆ ಒಂದರಲ್ಲೇ ತೆರೆಯಲಾಗುತ್ತಿತ್ತು. ರಾಜ್ಯ ಸೇರಿ ತಮಿಳುನಾಡು ಭಾಗದಿಂದಲೂ ಪಟಾಕಿ ಖರೀದಿ ಮಾಡಲು ಗ್ರಾಹಕರು ಬರುತ್ತಿದ್ದರು. ಆನೇಕಲ್ ತಾಲೂಕಿನ ಹೆಬ್ಬಗೋಡಿ , ಬೊಮ್ಮಸಂದ್ರ, ಚಂದಾಪುರ, ತೀರುಗೊಂಡನಹಳ್ಳಿ ನೆರಳೂರು ಮತ್ತು ಯಾರಂಡಹಳ್ಳಿ ಭಾಗದಲ್ಲಿ ಪಟಾಕಿ ಅಂಗಡಿಗಳ ಸಾಲು ಇರುತ್ತಿತ್ತು. ಆದರೆ ಈ ಬಾರಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಹಿನ್ನೆಲೆ ತಾತ್ಕಾಲಿಕ ಮಳಿಗೆಗಳು ತೆರೆದಿಲ್ಲ.

ನಿಯಮ ಪಾಲನೆ ಕಾಟಾಚಾರ

ಅಂಗಡಿಗಳಲ್ಲಿ ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆ ಎಂದು ನಾಮಲಕ ಹಾಕಲಾಗಿದೆ, ಕಳೆದ ಒಂದು ವಾರದಿಂದ ಆನೇಕಲ್ ತಾಲೂಕಿನ ಚಂದಾಪುರ ನೆರಳೂರು ಅತ್ತಿಬೆಲೆ ಹಾಗೂ ಸರ್ಜಾಪುರ ಮತ್ತು ಬಾಗಲೂರು ಮುಖ್ಯ ರಸ್ತೆಯ ಕಗ್ಗನೂರು ಬಳಿ ಪಟಾಕಿ ವ್ಯಾಪಾರ ನಡೆಯುತ್ತಿದೆ, ವಾರಾಂತ್ಯದಲ್ಲಿ ಪಟಾಕಿ ಖರೀದಿಸಲು ಬೆಂಗಳೂರು ಸೇರಿ ಸುತ್ತಮುತ್ತಲಿನಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದು, ಹೊಸೂರು ಬೆಂಗಳೂರು ಮುಖ್ಯರಸ್ತೆಯ ಹೆದ್ದಾರಿ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರಕ್ಕೆ ಜನ ನಿಂತಿದ್ದ ದೃಶ್ಯ ಕಂಡು ಬಂತು. ಕೆಲವು ಪಟಾಕಿ ಮಳಿಗೆಗಳಲ್ಲಿ ಸುರಕ್ಷತೆಯ ಸಾಧನಗಳು ಕಂಡುಬಂದರೆ ಇನ್ನು ಕೆಲವು ಪಟಾಕಿ ಮಳಿಗೆಗಳಲ್ಲಿ ಕೇವಲ ಕಾಟಾಚಾರಕ್ಕೆ ಮರಳು ಹಾಗೂ ಬೆಂಕಿ ಆರಿಸುವ ಸಿಲಿಂಡರ್ ಕಂಡುಬಂದವು. ಲೋಪ ದೋಷ ಪತ್ತೆ ಹಚ್ಚಿ ಜಂಟಿ ಸಮೀಕ್ಷೆಯಲ್ಲಿ ವರದಿ ಮಾಡಲಾಗಿದೆ. ಲೋಪದೋಷ ಸರಿಪಡಿಸಿಕೊಂಡವರಿಗೆ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.

ಮುಗಿಬಿದ್ದ ಗ್ರಾಹಕರು

ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ 6 ಮಳಿಗೆ, ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ 15 ಪಟಾಕಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದ್ದು, ಚಂದಾಪುರ ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ 11 ಪಟಾಕಿ ಅಂಗಡಿ ತೆರೆದಿವೆ. ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಮಳೆಗೆ ಪರವಾನಗಿ ದೊರೆತಿದೆ. ಸರ್ಜಾಪುರದಿಂದ ಬಾಗಲೂರಿಗೆ ಸಂಪರ್ಕ ಕಲ್ಪಿಸುವ ಕಗ್ಗನೂರು ಬಳಿ ಅತಿ ಹೆಚ್ಚು ಪಟಾಕಿ ಮಳಿಗೆಗಳು ತೆರೆದಿರುವ ಹಿನ್ನೆಲೆ ಗ್ರಾಹಕರು ಈ ಬಾರಿ ಅತ್ತಿಬೆಲೆಗಿಂತ ಹೆಚ್ಚಾಗಿ ಕಗ್ಗನೂರು ಭಾಗದತ್ತ ಮುಖ ಮಾಡಿದ್ದಾರೆ.

ಸುರಕ್ಷತೆ ಇಲ್ಲ

ಕಳೆದ ವರ್ಷ ಪಟಾಕಿ ದುರಂತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳಬೇಕಿದ್ದ ಕೆಲವು ಮಾರಾಟಗಾರರು ಯಾವುದೇ ಸುರಕ್ಷತೆ ಇಲ್ಲದೆ ಪಟಾಕಿ ಮಾರಾಟ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net