ಪಟಾಕಿ ಸಿಡಿತದಿಂದ ನೂರಕ್ಕೂ ಅಧಿಕ ಮಂದಿ ಕಣ್ಣಿಗೆ ಗಾಯ: ಇಬ್ಬರಿಗೂ ದೃಷ್ಟಿ ನಾಶ

Sudhee_15_Cracker_Injury_@_Minto_Hospital (2)
Published on

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬದಲ್ಲಿ ಕಣ್ಣಿನ ಹಾನಿ ಪ್ರಕರಣಗಳು ಮುಂದುವರೆದಿದ್ದು, ಈ ಬಾರಿ ಸಿಡಿಸಿದ ಪಟಾಕಿಯಿಂದ ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ.

ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಅನಾಹುತದಿಂದ ಚಿಕಿತ್ಸೆ ಪಡೆದ 32 ಮಂದಿಯಲ್ಲಿ 15 ಮಂದಿಗೆ ಗಂಭೀರಸ್ವರೂಪದ ಗಾಯಗಳಾಗಿದ್ದು, ಆರು ಮಂದಿಗೆ ಶಸಚಿಕಿತ್ಸೆ ನಡೆಸಲಾಗಿದೆ. ಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಐವರು ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಇನ್ನು ನಾರಾಯಣ ನೇತ್ರಾಲಯದಲ್ಲಿ 58 ಮಂದಿಯಲ್ಲಿ 25 ಮಕ್ಕಳು ಗಾಯಗೊಂಡಿದ್ದು, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 15 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ ಸಿಡಿಸುವಾಗ ಕೈ ಮತ್ತು ಮುಖ ಸುಟ್ಟುಕೊಂಡು ನಗರದ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಇಬ್ಬರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ತಗ್ಗದ ಪ್ರಕರಣಗಳು: ಪಟಾಕಿ ಅನಾಹುತ ತಪ್ಪಿಸುವ ಸಲುವಾಗಿ ಸಾರ್ವಜನಿಕವಾಗಿ ಎಷ್ಟೆಲ್ಲಾ ಜಾಗೃತಿ ಮೂಡಿಸಿದರೂ ಅನಾಹುತ ಪ್ರಕರಣಗಳು ತಗ್ಗಿಲ್ಲ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಸಿಡಿಸಿಲ್ಲವಾದರೂ, ಕಳೆದ ವರ್ಷದಂತೆ ನೂರಕ್ಕೂ ಅಧಿಕ ಮಂದಿಯ ಕಣ್ಣಿಗೆ ಹಾನಿಯಾಗಿದೆ. ಇಬ್ಬರು ದೃಷ್ಟಿ ಕಳೆದುಕೊಂಡಿದ್ದಾರೆ. ಪಟಾಕಿ ಸಿಡಿಸಿದವರಿಗಿಂತ ಅದನ್ನು ನೋಡುತ್ತಿದ್ದವರು ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ಅಮಾಯಕರೇ ಹೆಚ್ಚು ಗಾಯಾಳುಗಳಾಗಿದ್ದಾರೆ.

ನಾರಾಯಣ ನೇತ್ರಾಲಯದ ಅಧ್ಯಕ್ಷ ರೋಹಿತ್ ಶೆಟ್ಟಿ ಮಾತನಾಡಿ, ನಾರಾಯಣ ನೇತ್ರಾಲಯದಲ್ಲಿ 2019ರಲ್ಲಿ 35 ಮಂದಿ, 2020ರಲ್ಲಿ 24 ಮಂದಿ, 2021ರಲ್ಲಿ 17, 2022ರಲ್ಲಿ 45 ಮಂದಿ ಪಟಾಕಿ ಅವಘಡದಿಂದ ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ಆದರೆ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಅಮಾಯಕರೇ ಹೆಚ್ಚು ತೊಂದರೆಗೊಳಗಾಗಿದ್ದು, ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net