ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ

17 SARAG 2
ಸರಗೂರು ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಸ್ಸಿ, ಎಸ್ಟಿ ಕುಂದು ಕೊರತೆಗಳ ಸಭೆ ನಡೆಸಲಾಯಿತು.
Published on

ಸರಗೂರು: ಮದ್ಯ ಅಕ್ರಮ ಮಾರಾಟದ ಸಮಸ್ಯೆ ಬಗ್ಗೆ ಹೆಚ್ಚಿನ ದೂರುಗಳಿದ್ದವು. ಅದರಂತೆ ತಾಲೂಕಿನ ವ್ಯಾಪ್ತಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆ ನಡೆಸಿ ಮಾತನಾಡಿದರು. ಹಿಂದಿನ ತಿಂಗಳಲ್ಲಿ ಹಲವು ಮುಖಂಡರು ತಿಳಿಸಿದ್ದ ಸಮಸ್ಯೆಗಳಿಗೆ ಕಾರ್ಯರೂಪದಲ್ಲಿ ಉತ್ತರ ನೀಡಿದ್ದೇವೆ. ಮದ್ಯ ಅಕ್ರಮ ಮಾರಾಟದ ಸಮಸ್ಯೆ ಬಗ್ಗೆ ಹೆಚ್ಚಿನ ದೂರುಗಳಿದ್ದವು. ಅದರಂತೆ ಪ್ರತಿ ಗ್ರಾಮಕ್ಕೆ ಬೀಟ್ ಪೇದೆಗಳನ್ನು ನೇಮಕ ಮಾಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದೇವೆ ಎಂದರು.

ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಮದ್ಯ ಮಾರಾಟ ಹೆಚ್ಚಾಗಿದ್ದು, ಶಾಲೆ-ಕಾಲೇಜು ಆವರಣದಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಸಭೆಯಲ್ಲಿ ಶಾಲಾ-ಕಾಲೇಜು ಆವರಣದಲ್ಲಿ ಪೊಲೀಸ್ ಜೀಪು ಬೀಟ್ ಮಾಡಲು ಮನವಿ ಮಾಡಿದ್ದೆವು. ಆದರೆ ಅದು ಈಡೇರಿಲ್ಲ. ಬಸ್ ನಿಲ್ದಾಣದಲ್ಲಿ ಬೀಡಿ, ಸಿಗರೇಟ್ ಪೊಟ್ಟಣದ ತ್ಯಾಜ್ಯ ಮತ್ತು ಮದ್ಯದ ಖಾಲಿ ಬಾಟಲ್‌ಗಳು ತುಂಬಿ ಹೋಗಿದ್ದು, ಪ್ರಯಾಣಿಕರು ಕೂರಲು ಆಗದಂತಹ ಪರಿಸ್ಥಿತಿ ಇದೆ. ಸಂಜೆ ಆಗುತ್ತಲೇ ಪುಂಡರ ಹಾವಳಿ ಹೆಚ್ಚಾಗಿದ್ದು, ಇಲಾಖೆ ಕಡಿವಾಣ ಹಾಕಬೇಕಿದೆ ಎಂದು ಮನವಿ ಮಾಡಿದರು.

ಮನುಗನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ತಾಲೂಕಿನ ಕೆಲ ಗ್ರಾಮಗಳಲ್ಲಿ ಜಮೀನಿಗೆ ಸಂಬಂಧಿಸಿದ ಗಲಾಟೆಗಳು ನಡೆಯುತ್ತಿರುತ್ತದೆ. ಇದಕ್ಕೆ ಇಲಾಖೆ ಕ್ರಮ ವಹಿಸಬೇಕು. ಕೆಲ ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿ ಈಗಲೂ ಅಸ್ಪಶ್ಯತೆ ಜೀವಂತವಾಗಿದೆ. ಪಟ್ಟಣದ ಸಮುದಾಯದ ಭವನಗಳನ್ನು ಎಸ್ಸಿ ಸಮುದಾಯಗಳಿಗೆ ನೀಡುತ್ತಿಲ್ಲ. ದಲಿತ ಸಮುದಾಯದ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಹೀಗಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಶಾಂತಿಪುರ ಗ್ರಾಮದಲ್ಲಿ ದಲಿತ ಕುಟುಂಬದ ಜಮೀನು ಇದ್ದು , ಅದನ್ನು ಚಿಕ್ಕ ದೇವಮ್ಮನ ದೇವಸ್ಥಾನ ಸಮಿತಿಯವರು ನಮಗೆ ಸೇರಿದ್ದು ಎಂದು ಕಿರುಕುಳ ನೀಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ಸರ್ಕಾರ ದಲಿತ ಕುಟುಂಬಕ್ಕೆ ಸಾಗುವಳಿ ನೀಡಿತ್ತು . ಆದರೆ ಇತ್ತೀಚೆಗೆ ಸಮಿತಿಯವರು ನಮಗೆ ಸೇರಿದ್ದು ಎಂದು ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ತಾಲೂಕಿನಲ್ಲಿ ಸಭೆಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಅವರು, ಈಗಾಗಲೇ ನಮ್ಮ ಇಲಾಖೆ ವತಿಯಿಂದ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಯಾರ ಹತ್ತಿರವೂ ಸೂಕ್ತ ದಾಖಲೆಗಳಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಈಗ ವ್ಯಜ್ಯ ಎಸಿ ಕೋರ್ಟ್‌ನಲ್ಲಿದ್ದು, ಅಲ್ಲಿಂದ ತೀರ್ಪು ಬಂದ ಮೇಲೆ ಕ್ರಮ ವಹಿಸುತ್ತೇವೆ ಎಂದರು.

ಸರ್ಕಾರದ ಆದೇಶದಂತೆ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮ ತಾಲೂಕಿನಲ್ಲಿ ನಡೆಸಲಾಗುವುದು. ಅಲ್ಲದೆ ಸಾರ್ವಜನಿಕರಿಗೆ ಪೊಲೀಸ್ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆ ನೀಡಲಾಗುವುದು. ಇದರಿಂದ ಯಾವುದೇ ಸಮಸ್ಯೆ ಬಂದಾಗ ಸಾರ್ವಜನಿಕರು ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.

ಪಿಎಸ್‌ಐ ಆರ್.ಕಿರಣ್, ಮುಖಂಡರಾದ ಶುಂಭುಲಿಂಗನಾಯಕ, ನವೀನ್, ಗ್ರಾಮೀಣ ಮಹೇಶ್, ಸೋಮಣ್ಣ, ಕುಂದೂರು ಮೂರ್ತಿ, ಲಂಕೆ ಲಕ್ಷ್ಮಣ್ , ಚಿನ್ನಯ್ಯ, ಸರಗೂರು ಕೃಷ್ಣ, ನಾಗಣ್ಣ, ಬೀಲ್ಲಯ್ಯ, ಚಿಕ್ಕಬೋಮ್ಮ, ಪುಟ್ಟರಾಜು, ಇಟ್ನ ರಾಜಣ್ಣ, ಶ್ರೀನಿವಾಸ, ದೇವಲಾಪುರ ನಾಗೇಂದ್ರ, ಮಹದೇವನಾಯಕ, ಯೂತ್ ಅಧ್ಯಕ್ಷ ಮಸಹಳ್ಳಿ ನವೀನ್, ಅಡಹಳ್ಳಿ ಮಹದೇವ, ಬೋಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net