

ಚಡಚಣ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭೂಮಿಯಿಂದ ಆಗಾಗ ವಿಚಿತ್ರ ಶಬ್ದ ಕೇಳಿಬರುತ್ತಿದ್ದು, ಇದು ಜನರಲ್ಲಿ ಅತಂಕ ಮೂಡಿಸಿದೆ. ನಮ್ಮ ಭಾಗದಲ್ಲಿ ಭುವಿ ಬಗ್ಗೆ ಸಂಶೋಧನೆ ನಡೆಸಿ ನಿಗೂಢ ಶಬ್ದ ಬರಲು ಕಾರಣ ಏನು ಎಂದು ಪತ್ತೆ ಹಚ್ಚುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಕಾರ್ಯಕರ್ತರು ಚಡಚಣ ತಹಸೀಲ್ದಾರ್ ರಾಜೇಶ್ ಬರ್ಲಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘದ ಮುಖಂಡ ಸೋಮನಾಥ ಪಟ್ಟಣಶೆಟ್ಟಿ ಮಾತನಾಡಿ, ನಿಗೂಢ ಶಬ್ದವು ಬ್ಲಾಸ್ಟಿಂಗ್ ಅಥವಾ ಇನ್ನಾವುದೇ ಕ್ರಿಯೆಯಿಂದ ಉಂಟಾಗುತ್ತದೆಯೇ ಎನ್ನುವುದು ಅರಿವಿಗೆ ಬರುತ್ತಿಲ್ಲ. ಜೋರಾದ ಶಬ್ದ ಕೇಳಿಸುತ್ತಿದ್ದಂತೆ ಭೂಕಂಪನದ ಅನುಭವ ಕೆಲವರಿಗಾಗಿದೆ. ಇದರಿಂದ ಜನರಿಗೆ ಭಯ ಮತ್ತು ಆತಂಕ ಉಂಟಾಗುತ್ತಿದೆ. ಈ ಭಾಗದ ಜನತೆ ನೆಮ್ಮದಿಯಿಂದ ಬದುಕಲು ನೆರವಾಗುವ ಉದ್ದೇಶದಿಂದ ನಿಗೂಢ ಶಬ್ದದ ಹಿಂದಿರುವ ರಹಸ್ಯವನ್ನು ಭೇದಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ನಾಗು ಪ್ರಥಮಶೆಟ್ಟಿ, ಆನಂದ ನಿಗಡಿ, ಮಂಜುನಾಥ ಪಾಂಡ್ರೆ, ಮನೋರಾಯ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.