

ಆದರ್ಶ್‌ಅದ್ಕಲೇಗಾರ್, ಮಡಿಕೇರಿ
ಜಿಲ್ಲೆಯಲ್ಲಿ ಮಳೆಯ ನಡುವೆ ಮಡಿಕೇರಿ ನಗರದಲ್ಲಿ ಏಡಿ ಮಾರಾಟ ಬಲು ಜೋರಾಗಿ ಸಾಗುತ್ತಿದೆ.
ಹೌದು.. ಜಿಲ್ಲೆಯಲ್ಲಿ ಸುರಿಯುವ ಮಳೆಯ ಚಳಿಯನ್ನು ಬಿಸಿ ಮಾಡಲು ನಗರದ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಮಳೆಗಾಲದ ವಿಶೇಷ ಆಹಾರವಾಗಿ ಏಡಿ, ಬಿದಿರಿನ ಕಣಿಲೆ, ಮರಕೆಸ ಮಾರಾಟ ಮಾಡುತ್ತಿದ್ದಾರೆ. ಏಡಿ ವ್ಯಾಪಾರ ಬಲು ಜೋರಾಗಿ ಸಾಗಿದರೆ, ಕಣಿಲೆ, ಮರಕೆಸ ಒಂದು ದಿನ ವ್ಯಾಪಾರವಾದರೆ, ಮತ್ತೊಂದು ದಿನ ಬೇಡಿಕೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಕೆ.ಜಿ.ಗೆ ರೂ.೨೫೦, ಮಾಲೆಗೆ ರೂ.೩೦೦: ವ್ಯಾಪಾರಿಗಳು ಹಾರಂಗಿ ಬ್ಯಾಕ್ ವಾಟರ್‌ನಿಂದ ಏಡಿ ತಂದು ಕೆ.ಜಿಗೆ ರೂ.೨೫೦ ಮಾರಾಟ ಮಾಡಲಾಗುತ್ತಿದೆ. ಆದರೆ ೧೨ ಏಡಿಗಳಿರುವ ಒಂದು ಮಾಲೆಗೆ ೩೦೦ರೂ. ನಿಗದಿ ಮಾಡಿದ್ದರು ಸಾರ್ವಜನಿಕರು ಹಿಂದುಮುಂದು ನೋಡದೆ ಏಡಿ ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಮಳೆಯ ನಡುವೆ ಮಾರಾಟ ನಡೆಸುತ್ತಿದ್ದರೆ, ಗ್ರಾಹಕರು ಚೌಕಾಸಿ ಮಾಡಿ ಒಂದೆರಡು ಕೆ.ಜಿ. ಏಡಿ ಖರೀದಿ ಮಾಡುತ್ತಿರುವ ದೃಶ್ಯ ಕಂಡುಬರುತ್ತಿತ್ತು.
’ಹಿಂದೆ ಗದ್ದೆ, ಹಳ್ಳದ ಕಡೆ ಒಂದು ಸುತ್ತು ಹಾಕಿ ಬಂದರೆ ಸಾಕಷ್ಟು ಏಡಿಗಳು ಸಿಗುತ್ತಿತ್ತು. ಆದರೆ ಬದಲಾದ ದಿನಗಳಲ್ಲಿ ಇವುಗಳು ಕಣ್ಮರೆಯಾಗಿವೆ. ಇದಕ್ಕೆ ಕಾರಣ ಇಂದು ಗದ್ದೆಗಳನ್ನು ಪಾಳುಬಿಡುತ್ತಿರುವುದು. ಮಾರುಕಟ್ಟೆಗಳಲ್ಲಿ ಸಮುದ್ರದ ಏಡಿಗಳು ಸಿಗುತ್ತವೆ. ಆದರೆ ನಾಟಿ ಏಡಿ ರುಚಿ ಅವುಗಳಲ್ಲಿರುವುದಿಲ್ಲ. ಅಲ್ಲದೆ ಇಂದು ಗದ್ದೆಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡಣೆಯ ಪರಿಣಾಮ ಏಡಿಗಳ ಸಂಖ್ಯೆ ಇಳಿಮುಖವಾಗಿದೆ. ನಾವುಗಳು ವರ್ಷದಲ್ಲಿ ಒಂದು ಬಾರಿಯಾದರೂ ಏಡಿ ತಿನ್ನಬೇಕು. ಮನುಷ್ಯನ ಸ್ನಾಯು ಸೆಳೆತಕ್ಕೆ ಒಳ್ಳಯ ಮದ್ದು ಏಡಿಯಾಗಿದೆ. ಅಲ್ಲದೆ ಆಷಾಡ ಮಾಸದಲ್ಲಿ ಮರಕೆಸ, ಕಣಿಲೆ, ಏಡಿ ಇನ್ನಿತರ ಖಾಧ್ಯಗಳು ಮನುಷ್ಯನ ದೇಹವನ್ನು ಬೆಚ್ಚರಿಸಲು ಸಹಕಾರಿ’
ಎಂ.ಡಿ.ವನಜಾಕ್ಷಿ, ಹಿರಿಯರು
’ಏಡಿ ಕೊಂಡುಕೊಳ್ಳಲು ಜನ ಬರುತ್ತಿದ್ದಾರೆ. ಮಾರಾಟಕ್ಕೆ ತಂದ ಏಡಿಗಳು ಸಂಜೆ ಹೊತ್ತಿಗೆ ಖಾಲಿಯಾಗುತ್ತದೆ. ಹಾರಂಗಿ ಬ್ಯಾಕ್ ವಾಟರ್‌ನಿಂದ ಏಡಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇನೆ. ಕೊಡಗಿನಲ್ಲಿ ಹಲವು ಕಾರಣಗಳಿಂದ ಸ್ಥಳಿಯವಾಗಿ ಹೆಚ್ಚಿನ ಏಡಿ ದೊರೆಯುತ್ತಿಲ್ಲ. ಆದ್ದರಿಂದ ನಾವು ತಂದ ಏಡಿಯನ್ನು ಗ್ರಾಹಕರು ಕೊಂಡುಕೊಳ್ಳುತ್ತಾರೆ. ದಿನಕ್ಕೆ ೧೨ ಏಡಿಗಳುಳ್ಳ ೬೦-೭೦ ಸರಗಳು ಮಾರಾಟವಾಗುತ್ತದೆ’
-ಕುಮಾರ್, ಏಡಿ ವ್ಯಾಪಾರಿ