

ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಸರಾ ಕವಿಕಾವ್ಯ ಸಂಭ್ರಮ ಸಮಾರಂಭದಲ್ಲಿ 6 ಜನರಿಗೆ ಡಾ.ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತಿಗಳಾದ ಮೈಸೂರಿನ ಡಾ.ವಿಜಯಮಾಲಾ ರಂಗನಾಥ್, ಯಾದಗಿರಿಯ ನಾಗಣ್ಣ ಕಿಲಾರಿ, ಚಾಮರಾಜನಗರದ ಮಂಜು ಕೋಡಿಉಗನೆ, ದಕ್ಷಿಣ ಕನ್ನಡದ ವಿದ್ಯಾರಶ್ಮಿ ಪೆಲತ್ತಡ್ಕ, ಮಂಡ್ಯದ ಗಣಂಗೂರು ನಂಜೇಗೌಡ, ಕೋಲಾರದ ಗುಣವಂತ ಮಂಜು ಅವರಿಗೆ ಡಾ. ಸಿಪಿಕೆ ಕಾವ್ಯ ಪ್ರಶಸ್ತಿಯನ್ನು ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಪ್ರದಾನ ಮಾಡಿದರು.
ಸಾಹಿತಿ ಡಾ.ಸಿ.ಪಿ. ಕೃಷ್ಣ ಕುಮಾರ್ ಮಾತನಾಡಿ, ಕಾವ್ಯದಲ್ಲಿ ಲೋಕೋತ್ತರ, ಲೌಕಿಕ ಎರಡರ ಸಮನ್ವಯತೆ ಇರಬೇಕು. ಕಾವ್ಯ ಎಂದರೇ ಬೆಳಕು. ಬರೀ ಬೆಳಕಲ್ಲಿ, ಮಾಧುರ್ಯದ ಬೆಳಕು. ಬೆಳಕು ಮತ್ತು ಮಾಧುರ್ಯ ಸಂಗಮವಾಗಿ ಸಂಸ್ಕೃತಿ ಉಂಟಾಗುತ್ತದೆ ಎಂದರು.
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ರಾಷ್ಟ್ರಕವಿ ಕುವೆಂಪು ಅವರು ಸಾಹಿತಿ ದೇಜಗೌ ಅವರನ್ನು ಕುರಿತು ಹೇಳಿದ್ದರು. ದೇಜಗೌ ಅವರು ನನ್ನನ್ನು ಕೈಹಿಡಿದು ನಡೆಸಿದ್ದರಿಂದ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು. ನನ್ನ ಹೆಸರಿನಲ್ಲಿ ಪ್ರಶಸ್ತಿ ಪಡೆದವರು ಧನ್ಯರಲ್ಲ, ನನ್ನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನೇ ಧನ್ಯ. ಇದು ನನಗೆ ದೊರೆತ ಗೌರವ. ಪ್ರಶಸ್ತಿ ಪಡೆದ ಕವಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಅವರು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೃಷಿ ವಿಜ್ಞಾನಿ ವಸಂತಕುಮಾರ ತಿಮಕಾಪುರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ. ಗೋವಿಂದರಾಜು ಹಾಗೂ ಇತರರು ಇದ್ದರು.