

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರವು ಕಳೆದ 9 ವರ್ಷದ ಆಡಳಿತದಾವಧಿಯಲ್ಲಿ ಕಾರ್ಪೋರೆಟ್ ಕಂಪನಿಗಳಿಗೆ 15 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿದೆ. ಆದರೆ, ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಅನುದಾನದ ಖರ್ಚಿನ ವಿಚಾರದಲ್ಲಿ ಮಾತ್ರ ಹೊರೆ ಧೋರಣೆಯನ್ನು ಪ್ರದರ್ಶಿಸುತ್ತದೆ ಎಂದು ರಾಜ್ಯ ಸಿಪಿಎಂನ ಕಾರ್ಯದರ್ಶಿ ಯು.ಬಸವರಾಜ್ ಕಿಡಿಕಾರಿದರು.
ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಸಿಪಿಎಂ ಕೈಗೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
2014 ರಿಂದಲೂ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಬಡ ಜನರಿಗೆ ಸಾಕಷ್ಟು ಭರವಸೆಗಳನ್ನು ನೀಡಿದ್ದಾರೆ. ಆದರೆ, ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರವನ್ನು ತಡೆಯುವಲ್ಲಿ ವಿಫಲವಾಗಿದ್ದು ಹಸಿವಿನ ಸೂಚ್ಯಂಕದಲ್ಲಿ ದೇಶವು 121 ರಾಷ್ಟ್ರಗಳ ಪಟ್ಟಿಯಲ್ಲಿ 107 ಕ್ಕೆ ಕುಸಿದಿದೆ. ಮಹಿಳಾ, ದಲಿತ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಭೂಮಿ, ಗಣಿ, ಅರಣ್ಯ ಸಂಪತ್ತು ಲೂಟಿ, ಸರ್ಕಾರದ ಸಬ್ಸಿಡಿಗಳಿಂದ ಶ್ರೀಮಂತರು ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದರೆ, ಬಡ ಜನರು ಮಾತ್ರ ಕೆಲಸ ಮತ್ತು ಸಂಪಾದನೆ ಇಲ್ಲದೇ ಸಂಕಷ್ಟ ಜೀವನ ನಡೆಸುವಂತಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರವನ್ನು 200 ರೂ ಇಳಿಸಿದ ಹಿನ್ನೆಲೆಯಲ್ಲಿ ಅಂಧ ಭಕ್ತರು ದೊಡ್ಡ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಹಿಂದೆ 450 ರೂಗಳಿಂದ ೧೧೦೦ ರೂಗಳಿಗೆ ಏರಿಸಿದಾಗ ಮಾತ್ರ ಬಾಯಿ ಬಿಡುತ್ತಿರಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಷ್ಯಾದಿಂದ ಕಡಿಮೆ ಬೆಲೆಗೆ ಇಂಧನವನ್ನು ಖರೀದಿಸಿದರೂ ಸಹ ಕಾರ್ಪೋರೇಟ್ ಕಂಪನಿಗಳ ಅನುಕೂಲಕ್ಕಾಗಿ ಪೆಟ್ರೋಲ್, ಡಿಸೇಲ್ ದರ ಇಳಿಸಲಿಲ್ಲ. ಇಂತಹ ಸರ್ಕಾರದ ಧೋರಣೆಗಳಿಂದಲೇ ಉದ್ಯಮಿಗಳಾದ ಅದಾನಿ, ಅಂಬಾನಿ ಲಕ್ಷಾಂತರ ಕೋಟಿ ರೂ ಆದಾಯ ಗಳಿಸುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ, ಉದ್ಯೋಗ ಸೃಷ್ಟಿ, ಅನ್ನಭಾಗ್ಯ ಯೋಜನೆಗೆ 5 ಕೆ.ಜಿ.ಹೆಚ್ಚುವರಿ ಅಕ್ಕಿ, ವಿದ್ಯುತ್ ಖಾಸಗೀಕರಣ ನೀತಿ ಹಿಂಪಡೆಯುವುದು, ಮಾರಕ ಕಾಯ್ದೆಗಳ ರದ್ದು ಸೇರಿದಂತೆ ೫ ಹಕ್ಕೋತ್ತಾಯಗಳ ಜಾರಿಗೆಗೆ ಆಗ್ರಹಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಸಿದ್ದಗಂಗಪ್ಪ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ, ಮುಖಂಡರಾದ ರಘುರಾಮರೆಡ್ಡಿ, ಜಯರಾಮರೆಡ್ಡಿ, ಕೆ.ನಾಗರಾಜ್ ಮತ್ತಿತರರು ಇದ್ದರು.