

ಮಸ್ಕಿ: ಬಿಜೆಪಿ ಕೋಮುವಾದವನ್ನು ಮುನ್ನೆಲೆಗೆ ತಂದು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದು, ಜನರು ಇದನ್ನು ಅರ್ಥೈಸಿಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಒಗ್ಗಟ್ಟಾಗಬೇಕು ಎಂದು ಸಿಪಿಐ(ಎಂ.ಎಲ್) ಲಿಬರೇಷನ್ ರಾಜ್ಯ ಸಮಿತಿ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಜೊರಿಯೋ ಹೇಳಿದರು.
ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ಸಿಪಿಐ(ಎಂಎಲ್) ಲಿಬರೇಷನ್ ಪ್ರಥಮ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ಜೀವನ ನಿರ್ವಹಣೆ ಮಾಡಲು ಪರದಾಡುವಂತಾಗಿದೆ. ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತಂದು ದುಡಿಯುವ ಅವಧಿಯನ್ನು ಹೆಚ್ಚುಗೊಳಿಸಲಾಗಿದ್ದು, ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ರೈತರಿಗೆ ನೀಡುತ್ತಿದ್ದ ಸಹಾಯಧನ ಕಡಿತ ಮಾಡಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ದಲಿತ, ದಮನಿತರು ಹಾಗೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಬಂಡವಾಳಶಾಹಿಗಳ 14 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಾಲವನ್ನು ಮನ್ನಾ ಮಾಡಿ, ಜನರ ಮೇಲೆ ಇನ್ನಿಲ್ಲದ ತೆರಿಗೆ ಹೊರೆ ಹೇರಲಾಗಿದ್ದು, ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ನಿಲುವುಗಳ ಮೂಲಕ ಒಕ್ಕೂಟ ವ್ಯವಸ್ಥೆಗೆ ಸವಾಲೊಡ್ಡಿದೆ ಎಂದು ದೂರಿದರು.
ನಿತ್ಯ ಧರ್ಮ, ಜಾತಿ ಹಾಗೂ ಹುಸಿ ರಾಷ್ಟ್ರೀಯತೆ ಹೆಸರಲ್ಲಿ ಭಾವನಾತ್ಮಕ ವಿಚಾರಗಳನ್ನು ಹರಿಬಿಟ್ಟು ಜನರ ಬದುಕಿನ ಪ್ರಶ್ನೆಗಳನ್ನು ಮರೆಮಾಚಲಾಗಿದೆ. ಹೀಗಾಗಿ ಜನರು ಎಚ್ಚರ ವಹಿಸುವ ಅಗತ್ಯವಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೂಲಭೂತವಾದಿ ಶಕ್ತಿಗಳಿಗೆ ಪಾಠ ಕಲಿಸದಿದ್ದರೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿವೆ ಎಂದು ಕ್ಲಿಫ್ಟನ್ ಡಿ.ರೊಜೊರಿಯೋ ತಿಳಿಸಿದರು.
ರಾಜ್ಯ ಸಮಿತಿ ಸದಸ್ಯ ಪಿ.ಆರ್.ಎಸ್.ಮಣಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಗಾಲ, ಗುಳೆ, ನೀರಿನ ಸಮಸ್ಯೆ, ರೈತರ ಆತ್ಮಹತ್ಯೆಗೆ ಪರಿಹಾರ ಹುಡುಕುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು. 16 ಜನರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ನಾಗರಾಜ ಪೂಜಾರ್ ಅವರನ್ನು ಜಿಲ್ಲಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.