

ಸಿಂಧನೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದು ಸಿಪಿಐ(ಎಂಎಲ್) ಲಿಬರೇಷನ್ ಪಕ್ಷ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜೋರಿಯೊ ಹೇಳಿದರು.
ನಗರದ ಎಪಿಎಂಸಿಯ ರೈತ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಪಿಐ(ಎಂಎಲ್) ಲಿಬರೇಷನ್ ಪಕ್ಷದ 2ನೇ ರಾಜ್ಯ ಸಮ್ಮೇಳನದ ಪ್ರತಿನಿಧಿಗಳ ಅಧಿವೇಶನದಲ್ಲಿ ಮಾತನಾಡಿದರು. ರಾಜಕೀಯ ಮತ್ತು ಸಾಂಸ್ಥಿಕ ಹೋರಾಟವನ್ನು ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಹಿಡಿತದಲ್ಲಿಡಲು ಪಕ್ಷ ಜನರ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟದ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದರು.
ಭೂ ಸುಧಾರಣೆ, ಎಪಿಎಂಸಿ ಹಾಗೂ ಗೋಹತ್ಯೆ ಕಾಯ್ದೆ ಮತ್ತು ಮತಾಂತರ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಬಿಜೆಪಿ ತಂದಿರುವ ಜನವಿರೋಧಿ ಕಾನೂನುಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬೇಕು. ಕಾರ್ಪೋರೇಟ್ ಕೋಮುವಾದಿ ಶಕ್ತಿಗಳು ದುಡಿಯುವ ವರ್ಗದ ಮೇಲೆ ನಿರಂತರ ದಾಳಿ ನಡೆಸಿ, ಸಾರ್ವಜನಿಕ ಸಂಪತ್ತಿನ ಲೂಟಿ ಹೊಡೆಯುತ್ತಿವೆ ಎಂದು ಆರೋಪಿಸಿದರು.
ರೈತ, ಕಾರ್ಮಿಕ, ಮಹಿಳೆ ಹಾಗೂ ವಿದ್ಯಾರ್ಥಿ-ಯುವಜನರ ವಿರೋಧಿ ನೀತಿಗಳು ಮಾರಕ ಪರಿಣಾಮ ಬೀರುತ್ತಿವೆ. ನಿರುದ್ಯೋಗ, ಬಡತನ, ಕಾರ್ಮಿಕರ ಸಂಕಷ್ಟಗಳು ಹೆಚ್ಚುತ್ತಿವೆ. ಈ ನಡುವೆ ಪರಸ್ಪರ ಕೋಮುಭಾವನೆಗಳನ್ನು ಕೆರಳಿಸುವ ಮೂಲಕ ಕೇಂದದ ಬಿಜೆಪಿ ಸರ್ಕಾರ ಸಮಾಜವನ್ನು ಒಡೆದಾಳುತ್ತಿದೆ ಎಂದು ದೂರಿದರು.
ಪಾಲಿಟ್ ಬ್ಯುರೋ ಸದಸ್ಯ ವಿ.ಶಂಕರ್ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಧ್ವಂಸಗೊಳಿಸುತ್ತಿದೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಪುನಃ ಗುಲಾಮಗಿರಿ ಪದ್ಧತಿಗೆ ಜಾರಿಗೆ ಮುಂದಾಗಿದೆ. ಮೂರು ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲು ಮುಂದಾಗಿದ್ದ ಕೇಂದ್ರ ಸರ್ಕಾರ ದೆಹಲಿಯಲ್ಲಿ ರೈತರ ಐತಿಹಾಸಿಕ ಹೋರಾಟದ ಕಾರಣ ಹಿಂದೆ ಸರಿದಿದೆ ಎಂದು ತಿಳಿಸಿದರು.
ವೀಕ್ಷಕರಾಗಿ ಸಮ್ಮೇಳನಕ್ಕೆ ಆಗಮಿಸಿದ್ದ ಕೇಂದ್ರ ಸಮಿತಿ ಸದಸ್ಯ ಚಂದ್ರಮೋಹನ್ ಮಾತನಾಡಿದರು. ಎರಡು ದಿನಗಳ ಕಾಲದ ಸಮ್ಮೇಳನದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ವಿಜಯನಗರ, ರಾಯಚೂರು, ಕೊಪ್ಪಳ, ಕೊಡಗು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಕೋಲಾರ, ಚಿತ್ರದುರ್ಗ, ಕಲಬುರಗಿ, ದಾವಣಗೆರೆ ಜಿಲ್ಲೆಗಳಿಂದ 180ಕ್ಕೂ ಪ್ರತಿನಿಧಿಗಳು ಭಾಗವಹಿಸಿದ್ದರು. ಪಕ್ಷದ ದಸ್ತಾವೇಜುಗಳು ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಮಾಡಬೇಕಾದ ಕೆಲಸಗಳ ಕುರಿತು ಚರ್ಚೆ ನಡೆಸಲಾಯಿತು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸೌತ್ ಏಷಿಯಾ ಸಾಲಿಡಾರಿಟಿ ಗ್ರೂಪ್‌ನ ಕಲ್ಪನಾ, ಐಪ್ವಾ ರಾಷ್ಟ್ರಾಧ್ಯಕ್ಷೆ ರತಿರಾವ್, ಕೇಂದ್ರ ಸಮಿತಿ ಸದಸ್ಯೆ ಮೈತ್ರೇಯಿ ಕೃಷ್ಣನ್, ರಾಜ್ಯ ಸಮಿತಿ ಸದಸ್ಯರಾದ ಪಿ.ಆರ್.ಎಸ್.ಮಣಿ, ಪಿ.ಪಿ.ಅಪ್ಪಣ್ಣ, ನಿರ್ಮಲಾ.ಎಂ, ನಾಗರಾಜ್ ಪೂಜಾರ್, ಪರಸಪ್ಪ, ವಿಜಯ್ ದೊರೆರಾಜು, ಲೇಖಾ, ಮೋಹನ್ ಪ್ರಭಾಕರ, ಅಶೋಕಗೌಡ, ರಾಮಣ್ಣ ವಿಟ್ಲ, ಚನ್ನಯ್ಯ, ಅರಿಂದಮ್ ಇದ್ದರು.