

ಮಂಡ್ಯ: ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದುಡಿಯುವ ಜನತೆ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಆಹಾರ ಪದಾರ್ಥ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಇಳಿಕೆ ಮಾಡಿ ಬೆಲೆ ಏರಿಕೆ ನಿಯಂತ್ರಿಸಬೇಕು. ಶಿಕ್ಷಣ ಮುಗಿಸಿ ಉದ್ಯೋಗ ಸಿಗದೆ ನಿರುದ್ಯೋಗಿಯಾಗಿರುವ ಯುವ ಜನತೆಗೆ ನಿರುದ್ಯೋಗ ಭತ್ಯೆ ನೀಡಬೇಕು. ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಿಸಬೇಕು. ರಾಜ್ಯದ ಜಿಎಸ್‌ಟಿ ಪಾಲು ಸಕಾಲದಲ್ಲಿ ಪಾವತಿಸಬೇಕು. ಕಾರ್ಮಿಕ ಸಂಹಿತೆ ಹಿಂಪಡೆದು ಹಿಂದಿನ ಕಾನೂನು ಮುಂದುವರಿಸಬೇಕು. ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕು ಪತ್ರ ವಿತರಸಬೇಕು. ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನ ಹೆಚ್ಚಿಸಿ ಕೂಲಿಯನ್ನು ಸಹ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ಸೌಹಾರ್ದ ಯುತವಾಗಿ ಇತ್ಯರ್ಥಪಡಿಸಲು ತುರ್ತಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಬೇಕು. ಮಂಡ್ಯ ನಗರದ ತಮಿಳು ಕಾಲನಿ, ಎಚ್.ಕೋಡಿಹಳ್ಳಿ ಫಾರಂ, ಬೂದನೂರು ಸೇರಿದಂತೆ ಜಿಲ್ಲೆಯಲ್ಲಿನ ನಿವೇಶನ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಸಿ.ಕುಮಾರಿ, ಎನ್.ಸುರೇಂದ್ರ, ರಾಜು, ಚಂದ್ರಶೇಖರ್, ಅಮಾಸಯ್ಯ, ಎ.ಬಿ. ಶಶಿಕಲಾ, ಶ್ರೀನಿವಾಸ, ವೆಂಕಟೇಶ್, ಕೋಡಿಹಳ್ಳಿ ಸಂತೋಷ್ ಇತರರಿದ್ದರು.