ಸಾಲ ಮನ್ನಾಕ್ಕೆ ಸಿಪಿಐಎಂ ಒತ್ತಾಯ: ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ

28_09_Mdy_03(Protest)
Published on

ಮಂಡ್ಯ: ರೈತರು, ಕೂಲಿಕಾರರು ಮತ್ತು ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಂದ ಪಡೆದಿರುವುದು ಸೇರಿದಂತೆ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಕಡೆಗಣಿಸಿ ಕಾರ್ಪೊರೇಟ್ ಕಂಪನಿಗಳ ಆದಾಯ ಹೆಚ್ಚಿಸಲು ಸಹಕಾರ ನೀಡುತ್ತಿದೆ ಎಂದು ಆರೋಪಿಸಿದರು.

ಕೋವಿಡ್‌ನಿಂದ ತತ್ತರಿಸಿರುವ ಜನಸಾಮಾನ್ಯರು ಆರ್ಥಿಕ ಬದುಕನ್ನು ಸರಿಪಡಿಸಿಕೊಳ್ಳಲು ಶ್ರಮಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಾಲ ಮನ್ನಾ ಮಾಡಿ ಋಣಮುಕ್ತ ಕಾಯ್ದೆ ಜಾರಿಗೊಳಿಸಬೇಕು. ಬಡವರಿಗೆ ನಿವೇಶನ ಹಾಗೂ ವಸತಿರಹಿತರಿಗೆ ಪಕ್ಕಾ ಮನೆ ನೀಡಬೇಕು. ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ಕೊಡಬೇಕು. ನರೇಗಾ ಯೋಜನೆಯನ್ನು ನಗರಕ್ಕೂ ವಿಸ್ತರಿಸುವುದರ ಜತೆಗೆ, ಪ್ರತಿ ವ್ಯಕ್ತಿಗೆ 200 ದಿನ ಉದ್ಯೋಗ ನೀಡಬೇಕು. ಕೂಲಿ ಮೊತ್ತವನ್ನು ದಿನಕ್ಕೆ 750 ರೂ. ನಿಗದಿಪಡಿಸಬೇಕು. ಕಾರ್ಮಿಕರಿಗೆ ಮಾಸಿಕ 26 ಸಾವಿರ ರೂ. ಕನಿಷ್ಠ ವೇತನ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿ.ಕುಮಾರಿ, ಲಕ್ಷ್ಮೀ, ಚಂದ್ರಶೇಖರ್, ರಾಜು, ಸಂತೋಷ್, ನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net