ನೆಲ್ಲಿಹುದಿಕೇರಿಯಲ್ಲಿ ಸಿಪಿಐಎಂ ಪ್ರತಿಭಟನೆ

ಚಿತ್ರ 29ಎಸ್ ಡಿ ಪಿ 1.
ಪಡಿತರ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
Published on

ಸಿದ್ದಾಪುರ: ಸರ್ವರ್ ಸಮಸ್ಯೆಗೆ ಪರಿಹಾರ ಸೂಚಿಸಬೇಕು, ಪಡಿತರ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ನೆಲ್ಲಿಹುದಿಕೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನೆಲ್ಲಿಹುದಿಕೇರಿ ಗ್ರಾಪಂ ಎದುರು ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಪದಾಧಿಕಾರಿಗಳು ಅವ್ಯವಸ್ಥೆಗಳ ವಿರುದ್ಧ ಘೋಷಣೆ ಕೂಗಿ, ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.


ಪಕ್ಷದದ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಕ್ಕೆ ಸಹಾಯವಾಗಲೆಂದು ಪಡಿತರ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಸುಮಾರು 14 ದಿನಸಿ ಸಾಮಗ್ರಿಗಳನ್ನು ನೀಡಲಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಒಬ್ಬರಿಗೆ ಕೇವಲ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಗೆ ಬದಲಾಗಿ 140 ರೂ.ಗಳನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ. ಉಳಿದ ಯಾವುದೇ ಸಾಮಗ್ರಿಗಳನ್ನು ನೀಡುತ್ತಿಲ್ಲ. ಚುನಾವಣೆ ಸಂದರ್ಭ ಮಾತ್ರ ಪೊಳ್ಳು ಭರವಸೆಗಳನ್ನು ನೀಡಲಾಗುತ್ತಿದೆ ಎಂದು ಟೀಕಿಸಿದರು.
ಆರೋಗ್ಯ, ಉದ್ಯೋಗ ಮತ್ತಿತರ ಕ್ಷೇತ್ರಗಳ ಸರ್ಕಾರಿ ಸೌಕರ್ಯಗಳನ್ನು ಪಡೆಯಲು ಜನರಿಗೆ ಪಡಿತರ ಚೀಟಿ ಅಗತ್ಯವಾಗಿದೆ. ಆದರೆ, ಪಡಿತರ ಚೀಟಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ನೆಲ್ಲಿಹುದಿಕೇರಿ ಭಾಗದಲ್ಲಿ ನಿತ್ಯ ಸರ್ವರ್ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಗಮನಹರಿಸಿ ಸರ್ವರ್ ಸಮಸ್ಯೆ ಬಗೆಹರಿಸಬೇಕು. ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡವರ ಸಂಖ್ಯೆ ಹೆಚ್ಚು ಇದ್ದು, ಬಿಪಿಎಲ್ ಪಡಿತರ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.


ಬಿಪಿಎಲ್ ಕಾರ್ಡ್ ಮಾನದಂಡ ಬದಲಾಗಬೇಕು, ಎಲ್ಲ ಬಡ ಕೂಲಿ ಕಾರ್ಮಿಕರಿಗೂ ಬಿಪಿಎಲ್ ಕಾರ್ಡ್ ನೀಡಬೇಕು, ದಿನಸಿ ಸಾಮಗ್ರಿಗಳನ್ನು ಸಮರ್ಪಕವಾಗಿ ಒದಗಿಸಬೇಕು, ಶ್ರೀಮಂತರ ಬಳಿ ಇರುವ ಬಿಪಿಎಲ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಬೇಕು, ಬಿಪಿಎಲ್ ಕಾರ್ಡ್‌ದಾರರಿಗೆ ನಿಯಮಾನುಸಾರ ಇರುವ ಎಲ್ಲ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಭರತ್ ಆಗ್ರಹಿಸಿದರು.
ಸರ್ಕಾರ ಮತ್ತು ಅಧಿಕಾರಿಗಳು ಬಡವರ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.


ಮನವಿ ಪತ್ರವನ್ನು ಕುಶಾಲನಗರ ಆಹಾರ ನಿರೀಕ್ಷಕರಾದ ಸ್ವಾತಿ ಅವರ ಮೂಲಕ ಆಹಾರ ಸಚಿವರು, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹಾಗೂ ನೆಲ್ಲಿಹುದಿಕೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಅವರಿಗೆ ಸಲ್ಲಿಸಿದರು

ಪಕ್ಷದ ಪ್ರಮುಖರಾದ ಉದಯಕುಮಾರ್, ಅಭೀಬ್, ರವಿ, ರಘು, ಮುಸ್ತಫಾ, ಬೊಜಿ, ಲಲಿತಾ, ಚಂದ್ರ, ಕಾವೇರಿ, ರವಿ ಮತ್ತಿತರ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net