

ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಕಡಿಮೆ ದರಕ್ಕೆ ಗುತ್ತಿಗೆ ಆಧಾರದಲ್ಲಿ ನೀಡುವ ಆದೇಶ ಹಿಂಪಡೆಯಬೇಕು, ಅಪಾಯಕಾರಿ ಜಾಗದಲ್ಲಿರುವ ಬಡ ಕುಟುಂಬಗಳಿಗೆ ಸೇರಿದಂತೆ ನಿವೇಶನ ಹಂಚಿಕೆಯಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಎಂ) ನೆಲ್ಲಿಹುದಿಕೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ನೆಲ್ಲಿಹುದಿಕೇರಿ ಗ್ರಾ.ಪಂ. ಎದುರು ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಬಡವರ, ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.
ಸಿಪಿಐಎಂ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಉಳ್ಳವರ ಪರವಾದ ನಿಯಮಗಳನ್ನು ತಕ್ಷಣ ರೂಪಿಸುವ ಸರ್ಕಾರಗಳು ಬಡವರು ಹಾಗೂ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸುತ್ತಲೇ ಬರುತ್ತಿವೆ. ಬಡವರಿಗೆ ವಾಸವಿರಲು ನಿವೇಶನ ಅಥವಾ ವಸತಿಯನ್ನು ನೀಡಿ ಎಂದು ಒತ್ತಾಯಿಸಿ ಕಳೆದ ಹಲವು ವರ್ಷಗಳಿಂದ ಸಿಪಿಐಎಂ ಪಕ್ಷ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಟೀಕಿಸಿದರು.
ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಡುಬಡತನದಲ್ಲಿರುವ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಸೇರಿದಂತೆ ಇತರ ಕೆಲಸಗಳನ್ನು ಮಾಡುವ ಬಡ ಕುಟುಂಬಗಳು ಹುಟ್ಟಿನಿಂದಲೂ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದಾರೆ. ತೋಟದ ಲೈನ್‌ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ನದಿದಡ, ಬೆಟ್ಟಗುಡ್ಡಗಳ ಮೇಲೆ ಅಪಾಯಕಾರಿ ಸ್ಥಳಗಳಲ್ಲಿ ಬದುಕು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಜೀತ ವ್ಯವಸ್ಥೆ ಜೀವಂತವಾಗಿದೆ, ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಮತ್ತು ಮೂಲಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ನಿಗದಿಪಡಿಸಿರುವ ವಾಲ್ಲೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ 8.5 ಏಕರೆ ಜಾಗಕ್ಕೆ ಮೂಲಸೌಕರ್ಯ ಒದಗಿಸಬೇಕು. ಮನೆ ನಿರ್ಮಿಸಿಕೊಳ್ಳಲು ತಲಾ 10 ಲಕ್ಷ ರೂ. ನೀಡಬೇಕು, ನಿರಾಶ್ರಿತರ ಪಟ್ಟಿಯನ್ನು ಬದಲಾಯಿಸಿ ಹೊಸಪಟ್ಟಿಯನ್ನು ತಯಾರಿಸಬೇಕು, ನಿವೇಶನ ಹೊಂದಿರುವ ದಾಖಲಾತಿಗಳಿಲ್ಲದ ಸಾವಿರಾರು ಮನೆಗಳಿದ್ದು, 94ಸಿ ಮೂಲಕ ಹಕ್ಕು ಪತ್ರ ವಿತರಣೆಯಾಗದೆ ಇರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ವನ್ಯಜೀವಿಗಳ ದಾಳಿಯಿಂದ ಮನುಷ್ಯರನ್ನು ಮತ್ತು ಕೃಷಿಯನ್ನು ರಕ್ಷಿಸಬೇಕು, ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ರಸ್ತೆಗಳನ್ನು ಡಾಂಬರು ಅಥವಾ ಕಾಂಕ್ರಿಟೀಕರಣಗೊಳಿಸಬೇಕು, ರಸ್ತೆಗಳಿಗೆ ತಕ್ಷಣ ಚರಂಡಿ ನಿರ್ಮಾಣ ಮಾಡಬೇಕು, ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು, ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಬಿಡಿಸಿ ನಿವೇಶನ ರಹಿತ ಬಡವರಿಗೆ ಹಾಗೂ ಆದಿವಾಸಿ ಕುಟುಂಬಗಳಿಗೆ ನೀಡಬೇಕು ಮತ್ತು ಮನೆ ನಿರ್ಮಿಸಿಕೊಡಬೇಕು ಪ್ರತಿಭಟನಾಕಾರರು ಆಗ್ರಹಿಸಿದರು.
ಬೇಡಿಕೆಯ ಮನವಿ ಪತ್ರವನ್ನು ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್, ಸದಸ್ಯ ಎ.ಕೆ.ಚಂದ್ರನ್, ಕೆ.ಶಿವರಾಮನ್, ವೈ.ರವಿ, ಬೋಜಿ, ಡಿ.ಟಿ.ಉದಯನ್, ಲಲಿತಮ್ಮ, ಯೂಸೂಫ್, ಅಬಿಬ್, ಕಾವೇರಿ, ಸೌಕತ್ ಇತರರು ಇದ್ದರು.
ಅಧಿಕಾರಿಗಳ ಜತೆ ಸಭೆ: ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿವೇಶನದ ಬೇಡಿಕೆ, ವಿವಿಧ ಸಮಸ್ಯೆಗಳು ಮತ್ತು ಮೂಲಸೌಲಭ್ಯಗಳ ಕೊರತೆಯ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಪರಿವೀಕ್ಷಕ ಸಂತೋಷ್, ಅರಣ್ಯ ವಲಯಾಧಿಕಾರಿ ಸುಬ್ಬರಾಯ, ನಂಜುಂಡ ಸ್ವಾಮಿ, ಗ್ರಾ.ಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷೆ ಪ್ರಮೀಳಾ ಉಪಸ್ಥಿತರಿದ್ದರು.